ಕುಂದಾಪುರ: ಗಣರಾಜ್ಯೋತ್ಸವ ವಿಶೇಷ ಅತಿಥಿಯಾಗಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಮಹಿಳೆ ಕಟ್ ಬೆಲ್ತೂರಿನ ಜಯಶ್ರೀ
Views: 33
ಕನ್ನಡ ಕರಾವಳಿ ಸುದ್ದಿ: ದೆಹಲಿಯಲ್ಲಿ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿಯ ಕಟ್ ಬೆಲ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಮಹಿಳಾ ಉದ್ಯಮಿಯಾದ ಜಯಶ್ರೀ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಟ್ ಬೆಲ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾನಗರ ಚಿತ್ತೇರಿ ಕ್ರಾಸ್ ನಿವಾಸಿ ಜಯಶ್ರೀ ಅವರು ಸಂಜೀವಿನಿ ಸಂಘವೊಂದನ್ನು ರಚಿಸಿ, ಅದರ ಮೂಲಕ ಯಶಸ್ವಿ ಉದ್ಯಮಿಯಾಗಿ, 15 ಮಂದಿ ಮಹಿಳೆಯರಿಗೆ ಉದ್ಯೋಗದಾತರಾಗಿದ್ದಾರೆ.
ಬದುಕಿನ ಅಗತ್ಯತೆ, ಕುಟುಂಬದ ನಿರ್ವಹಣೆಗಾಗಿ ಅನಿವಾರ್ಯತೆಯಿಂದ ಹುಟ್ಟಿಕೊಂಡಿದ್ದೇ ಈ ಸಂಜೀವಿನಿ ಸಂಘದ ಮೂಲಕ ಹಲಸಿನ ಉತ್ಪನ್ನಗಳ ಉದ್ಯಮ. 10ನೇ ತರಗತಿಯವರೆಗೂ ಓದಿದರೂ, ಈಗ ಯಶಸ್ವಿ ಉದ್ಯಮಿಯಾಗಿ, ವಾರ್ಷಿಕ ಸರಾಸರಿ 15 ಲಕ್ಷ ರೂ. ವಹಿವಾಟು ನಡೆಸುತ್ತಿದ್ದಾರೆ.
ಆರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾಗಿ, ಅನಂತರ ಸಣ್ಣದಾಗಿ ಕ್ಯಾಟರಿಂಗ್ ಆರಂಭಿಸಿದರು. ರುಡ್ ಸೆಟ್ ತರಬೇತಿ, ಸಂಜೀವಿನಿ ಒಕ್ಕೂಟದ ಸದಸ್ಯೆಯಾಗಿ ಅದರ ಮೂಲಕ ಬಂಡವಾಳ ಹಾಕಿ, ಕ್ಯಾಟರಿಂಗ್ ಸೇವೆ ವಿಸ್ತರಿಸಿದರು.
ಹಲಸಿನ ಹಣ್ಣನ್ನು ಇವರು ಉದ್ಯಮಕ್ಕೆ ಆಯ್ಕೆ ಮಾಡಿಕೊಂಡಿ ರುವುದು ವಿಶೇಷ ಹಲಸಿನ ಹಣ್ಣಿನದ್ದೆ ಹೊಸ ಹೊಸ ಉತ್ಪನ್ನಗಳಾಗಿ ತಯಾರಿಸಿ, ಮಾರುಕಟ್ಟೆಗೆ ಪರಿಚಯಿಸಿದರು. ಜಿಲ್ಲೆ ಹಾಗೂ ಹೊರ ಜಿಲ್ಲೆಯ ಹಲಸು ಮೇಳದಲ್ಲಿ ಭಾಗವಹಿಸಿ ಹಲಸಿನ ಮೌಲ್ಯವರ್ಧನೆ ಉತ್ಪನ್ನವನ್ನು ಗ್ರಾಹಕರಿಗೆ ಪರಿಚಯಿಸಿದರು. ಹಲಸಿನ ಹಣ್ಣಿನ 15ಕ್ಕೂ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.
ಇವರ ಎಲ್ಲ ಕಾರ್ಯದಲ್ಲೂ ಬೆಂಬಲವಾಗಿ ನಿಂತ ಪತಿ ವಿನಯ್ ಅವರು ಕೂಡ ಪತ್ನಿ ಜಯಶ್ರೀ ಅವರೊಂದಿಗೆ ದಿಲ್ಲಿಯಲ್ಲಿ ಪಥಸಂಚಲನ ವೀಕ್ಷಿಸಲಿದ್ದಾರೆ. ಉಡುಪಿ ಜಿಲ್ಲೆಯಿಂದ ಆಯ್ಕೆಯಾಗಿರುವ ಏಕೈಕ ಮಹಿಳೆ ಇವರಾಗಿದ್ದಾರೆ.






