ಸರ್ಕಾರಿ ಪ್ರೌಢಶಾಲೆ ವಕ್ವಾಡಿ: ಇಳಾ ಪರಿಸರ ಸಂಘದ ವಿದ್ಯಾರ್ಥಿಗಳಿಂದ ಕ್ಷೇತ್ರಾಧ್ಯಯನ
Views: 47
ಕನ್ನಡ ಕರಾವಳಿ ಸುದ್ದಿ : ಕುಂದಾಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ವಕ್ವಾಡಿಯ ವಿದ್ಯಾರ್ಥಿಗಳು “ಇಳಾ ಪರಿಸರ ಸಂಘ”ದ ವತಿಯಿಂದ ಕ್ಷೇತ್ರಾಧ್ಯಯನ ಪ್ರವಾಸದ ಅಡಿ ಹತ್ತಿರದ ಅಸೋಡಿನ ಹಣ್ಣಿನ ತೋಟ, ಕಾಮಧೇನು ಗೋಶಾಲೆ ಹಾಗೂ ವಾದಿರಾಜ ಮಠಕ್ಕೆ ಭೇಟಿ ನೀಡಿದರು.
8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಶಾಲೆಯಿಂದ ಅಸೋಡಿನ ಹಣ್ಣಿನ ತೋಟದ ಸುತ್ತಲಿನ ಪರಿಸರ, ಮರ-ಗಿಡಗಳು, ಬೆಳೆಗಳ ಬಗ್ಗೆ ಪರಿಚಯಿಸಿಕೊಳ್ಳುತ್ತಾ ಅಲ್ಲಿ ನೀಡಿದ ನೀರು ಮತ್ತು ತಂಪು ಪಾನೀಯ ಸವಿದು ಊರವರ ನಗುಮುಖದ ಸ್ವಾಗತವನ್ನು ಸ್ವೀಕರಿಸುತ್ತಾ, ಪ್ರಕೃತಿಯ ಮಡಿಲಲ್ಲಿ ಅರ್ಧ ದಿನ ಕಳೆಯುವ ಉಲ್ಲಾಸದಲ್ಲೇ ಸಾಗಿದರು.
ಪವಾಡ ಪುರುಷರು ವಾದಿರಾಜರು ನಡೆದ ಪುಣ್ಯಭೂಮಿ, ವಾದಿರಾಜರು ಹುಟ್ಟಿದ ಗೌರಿ ಗೆದ್ದೆ ಹೂವಿನ ಕೆರೆ, ಮಠದವರು ಸುಮಾರು 30 ಎಕರೆ ಜಾಗದಲ್ಲಿ ನಡೆಸುತ್ತಿರುವ ಗೋಶಾಲೆಗೆ ತಲುಪಿದ ವಿದ್ಯಾರ್ಥಿಗಳು ಗೋಶಾಲೆಯ ಕಾರ್ಯವೈಖರಿ ಪರಿಚಯಿಸಿಕೊಂಡರು. ಅಲ್ಲಿನ ವಿವಿಧ ರಾಜ್ಯಗಳ ಹಸುಗಳು, ಎತ್ತುಗಳು, ಎಮ್ಮೆ, ಕೋಣಗಳ ಪರಿಚಯ ಮಾಡಿಕೊಳ್ಳುವುದರ ಜೊತೆಗೆ ಅವುಗಳು ಗೋಶಾಲೆಗೆ ಬಂದ ಬಗೆಯನ್ನು ಗೋಶಾಲೆಯ ಉಸ್ತುವಾರಿಗಳಿಂದ ತಿಳಿದುಕೊಂಡರು. ಗೋವುಗಳ ಆಹಾರ ಕ್ರಮ, ಅವುಗಳಿಂದ ನಾವು ಪಡೆಯಬಹುದಾದ ಅನುಕೂಲಗಳು, ಹೈನುಗಾರಿಕೆಯ ಬಗ್ಗೆ ಮಾಹಿತಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಹಸು ಕರುಗಳನ್ನು ಸಮೀಪದಿಂದ ನೋಡಿ ಆನಂದಿಸುವ ಸದಾವಕಾಶ ದೊರೆಯಿತು, ಜೊತೆಯಲ್ಲಿ ಈ ಗೋಶಾಲೆಯನ್ನು ವಾದಿರಾಜ ಮಠದವರು ನಿರ್ವಹಿಸುತ್ತಿದ್ದ ರೀತಿಯನ್ನು ಕೂಡ ತಿಳಿದುಕೊಂಡರು.
ಗೋಶಾಲೆಯವರು ನೀಡಿದ ಬಾಳೆಹಣ್ಣು ಹಾಗೂ ಬಿಸ್ಕೆಟ್ ಸ್ವೀಕರಿಸಿ , ಅವರಿಗೆ ಧನ್ಯವಾದ ಹೇಳಿ ನಂತರ ವಾದಿರಾಜರ ಜನನ ಸ್ಥಳವಾದ ಹೂವಿನಕರೆಯ ಮಠಕ್ಕೆ ಭೇಟಿ ನೀಡಲಾಯಿತು. ವಾದಿರಾಜರು ಜನಿಸಿದ ಗೌರಿಗದ್ದೆ ಹಾಗೂ ಮಠದ ವಾತಾವರಣವನ್ನು ಕಣ್ತಂಬಿಸಿಕೊಳ್ಳುವುದರ ಜೊತೆಗೆ ವಾದಿರಾಜರ ಜನನದ ವೃತ್ತಾಂತವನ್ನು ಹಾಗೂ ಅವರು ಮಾಡಿದ ಪವಾಡಗಳನ್ನು ವಾದಿರಾಜ ಮಠದ ಉಸ್ತುವಾರಿಯಾಗಿರುವ ಶ್ರೀ ವಾದಿರಾಜರಿಂದ ತಿಳಿದುಕೊಂಡರು.
ಶಾಲೆಯ ಇಳಾ ಪರಿಸರ ಸಂಘದ ಸಂಚಾಲಕಿ ಭಾರತಿ ಇವರ ಮಾರ್ಗದರ್ಶನದಲ್ಲಿ 8 ಮತ್ತು 9 ನೇ ತರಗತಿಯ ಸುಮಾರು 50 ವಿದ್ಯಾರ್ಥಿಗಳು ಈ ಕ್ಷೇತ್ರಾಧ್ಯಯನ ಪ್ರವಾಸದಲ್ಲಿ ಭಾಗವಹಿಸಿದ್ದರು. ಈ ಕ್ಷೇತ್ರ ಪ್ರವಾಸದಲ್ಲಿ ಶಿಕ್ಷಕರಾದ ಸುರೇಶ್ ಸರ್, ಕುಸುಮಾಕರ ಶೆಟ್ಟಿ ಸರ್ ಮತ್ತು ಶೈಲಾ ಮೇಡಂ, ಶ್ರೀದೇವಿ ಮೇಡಂ ರವರು ಸಹಕರಿಸಿದ್ದರು. ಅರ್ಧ ದಿನಕ್ಕೆ ಸೀಮಿತವಾಗಿ ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ಸಂಘಟಿಸಲಾಗಿತ್ತು.









