ಸಾಂಸ್ಕೃತಿಕ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ 2025ರ ಸಮಾರೋಪ

Views: 11

ಕನ್ನಡ ಕರಾವಳಿ ಸುದ್ದಿ : ಯಕ್ಷಗಾನ ಕಲೆ, ಕಲಾವಿದರ ಹಿತದೃಷ್ಟಿಯಿಂದ ಉಡುಪಿಯ ಯಕ್ಷಗಾನ ಕಲಾರಂಗ ನಡೆಸುತ್ತಿರುವ ನಿಸ್ವಾರ್ಥ ಸೇವೆ ಇತರ ಕ್ಷೇತ್ರಗಳಿಗೆ ಮಾದರಿಯಾಗಿದೆ ಎಂದು ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.

ಅವರು ಗುರುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ -2025ರ ಸಮಾರೋಪದಲ್ಲಿ ಮಾತನಾಡಿದರು.

ಉಡುಪಿಯ ಅಷ್ಟ ಮಠಗಳು ಕಲಾಪೋಷಣೆಯನ್ನು ನಿರಂತರ ನಡೆಸಿಕೊಂಡು ಬಂದಿವೆ. ಪ್ರಸ್ತುತ ತಮ್ಮ ಚತುರ್ಥ ವಿಶ್ವಗೀತಾ ಪರ್ಯಾಯದ ಎರಡು ವರ್ಷಗಳ ಈ ಅವಧಿಯಲ್ಲಿ ಈವರೆಗೆ 1700ಕ್ಕೂ ಅಧಿಕ ಕಾರ್ಯಕ್ರಮಗಳು ನಡೆದಿವೆ. ಒಂದರ್ಥದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರವಾಹವೇ ಹರಿದು ಬಂದಿದೆ. ಈ ರಾಜಾಂಗಣಕ್ಕೆ 800 ವರ್ಷಗಳ ಇತಿಹಾಸವಿದೆ. ಇಲ್ಲಿ ತಮ್ಮ ಪ್ರತಿಭೆ, ವಿದ್ವತ್ತನ್ನು ಪ್ರದರ್ಶನ ಮಾಡಿದ ಪ್ರತಿಯೋರ್ವರು ಸಮಾಜದಲ್ಲಿ ಉನ್ನತಿಗೇರಿದ್ದಾರೆ. ಹೀಗಾಗಿ ಶ್ರೀಕೃಷ್ಣನ ಸನ್ನಿಧಾನವಾದ ಈ ರಾಜಾಂಗಣ ಎಲ್ಲದರ ಮೂಲಸ್ಥಾನ ಎಂದು ಶ್ರೀಗಳು ಬಣ್ಣಿಸಿದರು.

ಶಿಕ್ಷಣ, ಧರ್ಮ, ಕಲೆ, ಸೇವೆಗೆ ಉಡುಪಿ ಪ್ರಖ್ಯಾತಿ ಪಡೆದಿದೆ. ಈ ಯಕ್ಷಶಿಕ್ಷಣದ ಮೂಲಕ ಯಕ್ಷಗಾನ ಕಲಾರಂಗ ಈ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೇರಿಸಿದೆ. ಶ್ರೀಕೃಷ್ಣನ ಗೀತಾ ಸಂದೇಶದoತೆ ಸಮಾಜ, ಕಲಾಸೇವೆಗೈದ ಯಕ್ಷಗಾನ ಕಲಾರಂಗಕ್ಕೆ ಇಂತಹದೊoದು ಮಾದರಿ ಸೇವೆಯನ್ನು ನಡೆಸಲು ಸಾಧ್ಯವಾಗಿದೆ ಎಂದು ನಾವು ಭಾವಿಸಿದ್ದೇವೆ. ಯಕ್ಷಗಾನ ಕಲಾರಂಗ ಇನ್ನಷ್ಟು ಬೆಳೆಯಲಿ ಎಂದು ಅವರು ಹಾರೈಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ತಾನು ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಅಂದಿನ ಶಾಸಕರಾಗಿದ್ದ ರಘುಪತಿ ಭಟ್ ಅವರಿಂದ ಆರಂಭಗೊoಡ ಈ ಯಕ್ಷಶಿಕ್ಷಣ ಇಂದು ಹೆಮ್ಮರವಾಗಿ ಬೆಳೆದಿದ್ದು, 3000ಕ್ಕೂ ಅಧಿಕ ಮಕ್ಕಳು ಯಕ್ಷ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಯಕ್ಷ ಶಿಕ್ಷಣದ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನ ನಡೆದಿದೆ. ಸಭಾಕಂಪನ ಇಲ್ಲದೆ ನಿರರ್ಗಳ ಶುದ್ಧ ಕನ್ನಡ ಭಾಷೆ, ಅಭಿನಯ, ನಾಟ್ಯ ಹೀಗೆ ಎಲ್ಲದರಲ್ಲೂ ಈ ಮಕ್ಕಳು ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಯಕ್ಷಗಾನ ಕಲೆಗೆ ಭವ್ಯ ಭವಿಷ್ಯವನ್ನು ಬರೆದಿರುವ ಯಕ್ಷ ಶಿಕ್ಷಣ ನಮ್ಮ ರಾಜ್ಯಕ್ಕೆ ಹೆಮ್ಮೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಪುತ್ತಿಗೆ ಕಿರಿಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥರು ಉಪಸ್ಥಿತರಿದ್ದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿ ಎಲ್ಲಾ ಶಾಲೆಗಳ ಪ್ರದರ್ಶನವನ್ನು ಏರ್ಪಡಿಸುವ ವ್ಯವಸ್ಥೆಯನ್ನು ಉಡುಪಿಯ ‘ಯಕ್ಷಶಿಕ್ಷಣ ಟ್ರಸ್ಟ್’ ಕಳೆದ ಹದಿನೆಂಟು ವರ್ಷಗಳಿಂದ ನಿರ್ವಹಿಸುತ್ತಿದೆ. 94 ಶಾಲೆಗಳ 3,000ಕ್ಕೂ ಅಧಿಕ ವಿದ್ಯಾರ್ಥಿಗಳು, 41 ಯಕ್ಷಗಾನ ಗುರುಗಳು ಈ ಮಹಾಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ವಿಮರ್ಶಕ ಡಾ. ಪ್ರಭಾಕರ ಜೋಶಿ ಮಾತನಾಡಿದರು. ದಾನಿ ಯು. ವಿಶ್ವನಾಥ ಶೆಣೈ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರದರ್ಶನ ನೀಡಿದ ಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಕೃತಿ, ಸಮರ್ಥ, ಅಮೋಘ, ಪ್ರಾರ್ಥನಾ, ಸಾನ್ವಿ ಬಲ್ಲಾಳ, ದಿಷಿತಾ, ಬಿಂದು, ಮಣಿಕಂಠ, ಅವನಿ ಪಡುಕೋಣೆ, ಹರ್ಷಿತಾ, ಮನೋಜ್, ಅಮೃತಾ ಮೊದಲಾದವರು ತಮ್ಮ ಅನುಭವಗಳನ್ನು ಹಂಚಿಕೊoಡರು.

ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಜಿ.ಶೆಟ್ಟಿ, ಯು.ಎಸ್. ರಾಜಗೋಪಾಲ ಆಚಾರ್ಯ, ನಿರಂಜನ ಭಟ್, ಗಣೇಶ ಬ್ರಹ್ಮಾವರ, ಕೆ.ಸದಾಶಿವ ರಾವ್, ನಾಗರಾಜ ಹೆಗಡೆ, ಗಣಪತಿ ಭಟ್, ಕೆ. ಅಜಿತ್ ಕುಮಾರ್, ಎಚ್.ಎನ್. ವೆಂಕಟೇಶ, ಕೆ.ಆನಂದ ಶೆಟ್ಟಿ, ಡಾ. ರಾಘವೇಂದ್ರ ರಾವ್, ಡಾ.ಪ್ರತಿಮಾ, ಮಂಜುನಾಥ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಿಸಿದರು.

ಶ್ರೀಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ‘ಶಶಿಪ್ರಭಾ ಪರಿಣಯ’ ಯಕ್ಷಗಾನ ಪ್ರದರ್ಶನಗೊಂಡಿತು.

 

Related Articles

Back to top button