ನಮ್ಮ ಮೆಟ್ರೋ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ, ಮೆಟ್ರೋ ಸಂಚಾರ ಸ್ಥಗಿತ
Views: 59
ಕನ್ನಡ ಕರಾವಳಿ ಸುದ್ದಿ ಬೆಂಗಳೂರಿನ ಕೆಂಗೇರಿ ನಮ್ಮ ಮೆಟ್ರೋ ಸ್ಟೇಷನ್‌ನಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 8.15ಕ್ಕೆ ವ್ಯಕ್ತಿಯೊಬ್ಬರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ.
ಮೈಸೂರು ರಸ್ತೆ–ಚಲ್ಲಘಟ್ಟ ನಡುವೆ ರೈಲು ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಮೆಟ್ರೋ ರೈಲುಗಳು ವೈಟ್‌ಫೀಲ್ಡ್ನಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ ಮಾತ್ರ ಸಂಚರಿಸುತ್ತಿವೆ.
ಘಟನೆ ಸ್ಥಳಕ್ಕೆ ಮೆಟ್ರೋ ಸುರಕ್ಷತಾ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ನೇರಳೆ ಮಾರ್ಗದ ಮೆಟ್ರೋ ರೈಲುಗಳು ಪ್ರಸ್ತುತ ಮೈಸೂರು ರಸ್ತೆ ನಿಲ್ದಾಣದವರೆಗೆ ಮಾತ್ರ ಸಂಚರಿಸುತ್ತಿವೆ. ಮೈಸೂರು ರಸ್ತೆ ಮತ್ತು ಚಲಘಟ್ಟ ನಡುವಿನ ಸೇವೆಗಳು ಕೆಂಗೇರಿ ನಿಲ್ದಾಣದಲ್ಲಿ ಸಂಭವಿಸಿದ ಆತ್ಮಹತ್ಯೆ ಪ್ರಯತ್ನದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಬಿಎಂಆರ್ಸಿಎಲ್ ಎಕ್ಸ್ ಸಂದೇಶದ ಮೂಲಕ ತಿಳಿಸಿದೆ.






