ಸಾಂಸ್ಕೃತಿಕ

ಯಕ್ಷಗಾನ ಕಲಾವಿದ ಈಶ್ವರ ಗೌಡ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

Views: 150

ಕನ್ನಡ ಕರಾವಳಿ ಸುದ್ದಿ: ಮಂದಾರ್ತಿ ಎರಡನೇ ಮೇಳದಲ್ಲಿ ದೇವಿ ಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರ ಮುಗಿಸಿ ಚೌಕಿಗೆ ನಿರ್ಗಮಿಸುತ್ತಿದ್ದಂತೆ ಈಶ್ವರ ಗೌಡರು ( 51) ಹೃದಯಾಘಾತದಿಂದ ನಿನ್ನೆ ನಿಧನರಾದರು. ಅವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿಯ ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಈಶ್ವರ ಗೌಡರು ಬುಧವಾರ ರಾತ್ರಿ ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥ ಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಅದಾಗಲೇ ಕೊನೆಯುಸಿರೆಳೆದರು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರಾದ ಗೌಡರು ಶಿವರಾಜಪುರ, ಮೇಗರವಳ್ಳಿ, ಮಡಾಮಕ್ಕಿ, ಅಮೃತೇಶ್ವರೀ, ಮಂದಾರ್ತಿ ಮೇಳಗಳಲ್ಲಿ ಸುಮಾರು ಮೂರು ದಶಕಗಳಿಂದ ಕಲಾಸೇವೆ ಮಾಡುತ್ತಾ ಬಂದಿದ್ದರು. ಅವರ ತಂದೆ ಕೂಡ ಯಕ್ಷಗಾನ ಕಲಾವಿದರಾಗಿದ್ದಾರೆ. ಈಶ್ವರ ಗೌಡರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಈಶ್ವರ ಗೌಡರು ಪೌರಾಣಿಕ ಪುರುಷ ಪಾತ್ರಗಳನ್ನು ಸಮರ್ಥವಾಗಿ ರಂಗದಲ್ಲಿ ಪ್ರಸ್ತುತ ಗೊಳಿಸುವ ಕಲಾಸಿದ್ಧಿ ಪಡೆದಿದ್ದರು. ಅವರ ನಿಧನದಿಂದ ಯಕ್ಷಗಾನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿ ಸರ್ವ ಸದಸ್ಯರು ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button
error: Content is protected !!