ರಾಜಕೀಯ

ಸಚಿವ ಸಂಪುಟ ಪುನರ್‌ರಚನೆಗೆ ಹೈಕಮಾಂಡ್‌ ಹಸಿರು ನಿಶಾನೆ:ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಶಾಸಕರ ದೆಹಲಿ ಯಾತ್ರೆ

Views: 58

ಕನ್ನಡ ಕರಾವಳಿ ಸುದ್ದಿ: ಸಚಿವ ಸಂಪುಟ ಪುನರ್‌ರಚನೆಗೆ ಕಾಂಗ್ರೆಸ್‌‍ ಹೈಕಮಾಂಡ್‌ ಹಸಿರು ನಿಶಾನೆ ತೋರಿಸಿರುವ ಹಿನ್ನೆಲೆಯಲ್ಲಿ ಅವಕಾಶ ಗಿಟ್ಟಿಸಲು ಶಾಸಕರು ದೆಹಲಿಯಾತ್ರೆ ಆರಂಭಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ನಿನ್ನೆ ಸಿದ್ದರಾಮಯ್ಯ ಅವರ ದೆಹಲಿ ಭೇಟಿಯ ವೇಳೆ ಹೆಚ್ಚಿನ ಚರ್ಚೆಯಾಗಿಲ್ಲ. ಆದರೆ, ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ ವೇಳೆ ಸಂಪುಟ ಪುನರ್‌ರಚನೆಗೆ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಹೇಳಲಾಗಿದೆ. ಸರ್ಕಾರ ಎರಡೂವರೆ ವರ್ಷ ಪೂರೈಸಿ ರುವ ಹಿನ್ನೆಲೆಯಲ್ಲಿ ಸಂಪುಟ ಪುನರ್‌ರಚನೆ ಕೈಗೊಳ್ಳ ಬಹುದು ಎಂದು ರಾಹುಲ್‌ಗಾಂಧಿ ಹೇಳಿದ್ದು, ಇನ್ನು ಮುಂದೆ ಯಾರನ್ನು ಕೈಬಿಡಬೇಕು ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಚರ್ಚೆಗಳು ಆರಂಭವಾಗಲಿವೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲೇ ಬೀಡು ಬಿಟ್ಟಿದ್ದು, ರಾಜಕೀಯ ಚರ್ಚೆ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡುತ್ತಿದ್ದು, ಹೈಕಮಾಂಡ್‌ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲ ಅವರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸಕರಾದ ಪಿ.ಎಂ ಅಶೋಕ್‌. ಎ.ಎಸ್‌‍.ಪೊನ್ನಣ್ಣ, ಬಸವರಾಜ ರಾಯರೆಡ್ಡಿ, ಅಪ್ಪಾಜಿನಾಡಗೌಡ ಮತ್ತಿತರರು ಮುಖ್ಯಮಂತ್ರಿ ಅವರ ಜೊತೆ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಸಚಿವ ಸ್ಥಾನ ಗಿಟ್ಟಿಸಲು ಲಾಬಿ ನಡೆಸುತ್ತಿದ್ದಾರೆ. ಜೇವರ್ಗಿ ಶಾಸಕ ಅಜಯ್‌ಸಿಂಗ್‌, ದಿಢೀರ್‌ ದೆಹಲಿಗೆ ತೆರಳಿದ್ದು ವರಿಷ್ಠರನ್ನು ಮನವೊಲಿಸಿ ಅವಕಾಶ ಗಿಟ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಸಚಿವ ಸಂಪುಟ ಪುನರ್‌ರಚನೆಯಲ್ಲಿ ಬಹಳಷ್ಟು ಮಂದಿ ಸಚಿವರನ್ನು ಕೈ ಬಿಡುವ ಸಾಧ್ಯತೆಯೂ ಇದೆ. ಮೂಲಗಳ ಪ್ರಕಾರ ಕೆ.ಎಚ್‌. ಮುನಿಯಪ್ಪ, ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ಶರಣಬಸಪ್ಪ ದರ್ಶನಪುರ್‌, ಶಿವಾನಂದ ಪಾಟೀಲ್‌, ಆರ್‌.ಬಿ. ತಿಮಾಪುರ್‌, ಡಾ. ಶರಣಪ್ರಕಾಶ್‌ ಪಾಟೀಲ್‌, ಲಕ್ಷ್ಮೀ ಹೆಬ್ಬಾಳ್ಕರ್‌, ರಹೀಂಖಾನ್‌, ಡಿ. ಸುಧಾಕರ್‌ ಅವರು ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಕೆಲವು ಸಚಿವರು ದೆಹಲಿಗೆ ಭೇಟಿ ನೀಡುತ್ತಿದ್ದು ಕುರ್ಚಿ ಭದ್ರಪಡಿಸಿಕೊಳ್ಳಲು ಹೈಕಮಾಂಡ್‌ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಚಿವ ಸಂಪುಟ ಪುನರ್‌ ರಚನೆ ಹಸಿರು ನಿಶಾನೆ ಸಿಕ್ಕಿರುವ ಹಿನ್ನೆಲೆಯಲ್ಲಿ ನಾಯಕತ್ವದ ಚರ್ಚೆ ನೇಪಥ್ಯಕ್ಕೆ ಸರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಅಭಾದಿತ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಹೈಕಮಾಂಡ್‌ ಒಪ್ಪಿದರೂ ಸ್ಥಳೀಯ ಪರಿಸ್ಥಿತಿಯಲ್ಲಿ ಸಂಪುಟ ಪುನರ್‌ರಚನೆ ಕಷ್ಟಸಾಧ್ಯ ಎನ್ನಲಾಗುತ್ತಿದೆ. ರಾಜ್ಯ ರಾಜಕಾರಣದಲ್ಲಿ ಮೂರ್ನಾಲ್ಕು ಶಕ್ತಿ ಕೇಂದ್ರಗಳು ಸೃಷ್ಟಿಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟ ಪುನರ್‌ರಚನೆಯ ಪರಮಾಧಿಕಾರ ಇದ್ದರೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಪಟ್ಟಿಯನ್ನು ಸಮದೂಗಿಸಬೇಕಿದೆ.

 

Related Articles

Back to top button
error: Content is protected !!