ಇನ್ಮುಂದೆ 2 ಸಾವಿರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ.0.25ರಿಂದ 0.4ರಷ್ಟು ಶುಲ್ಕ UPI ಪಾವತಿಗೆ ಸೇವಾ ಶುಲ್ಕ ಜಾರಿ?
Views: 47
ಕನ್ನಡ ಕರಾವಳಿ ಸುದ್ದಿ: 2,000 ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗೆ ಶುಲ್ಕ ವಿಧಿಸಲು ಕೇಂದ್ರ ಸರಕಾರ ಮುಂದಾಗಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆಯು, ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರ ಅಧಿಸೂಚಿತ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೇಲೆ ಎಂಡಿಆರ್ ವಿಧಿಸುವ ನಿರ್ಬಂಧವನ್ನು ತೆಗೆದುಹಾಕಲು ಪ್ರಯತ್ನಿಸಿದೆ. ಈ ಹಿನ್ನೆಲೆಯಲ್ಲಿ 2,000 ರು.ಗಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ 0.25% ರಿಂದ 0.4% ವರೆಗೆ ಶುಲ್ಕ ವಿಧಿಸಲು ಸರಕಾರ ಅನುಮತಿಸುವ ಸಾಧ್ಯತೆಯಿದೆ.
ಆದರೆ ಈ ಪ್ರಸ್ತಾಪವನ್ನು ಯಾವಾಗ ಜಾರಿಗೆ ತರಲಾಗುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ. ಸದ್ಯ ಯುಪಿಐ ವಹಿವಾಟಿನ ಶೇ. 65ರಷ್ಟು ವಹಿವಾಟು 2 ಸಾವಿರ ರು. ಒಳಗೆ ನಡೆಯುತ್ತಿದೆ. ಶುಲ್ಕ ಜಾರಿಯಿಂದ ಹಾಲು, ತರಕಾರಿಗಳು ಮತ್ತು ದಿನಸಿಗಳಂತಹ ದೈನಂದಿನ ಖರೀದಿಗಳು ಅಥವಾ ಆಟೋ ಅಥವಾ ಟ್ಯಾಕ್ಸಿ ಬಳಕೆಗಾಗಿ ಪಾವತಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಆದರೆ ಬ್ಯಾಂಕ್ ಶುಲ್ಕ ತಪ್ಪಿಸಲು ಒಂದು ಲಕ್ಷ ರು. ವರೆಗೂ ಯಪಿಐ ಮೂಲಕ ಪಾವತಿಸಲಾಗುತ್ತಿದೆ. ಜುಲೈ ತಿಂಗಳಲ್ಲಿ 2,370 ಕೋಟಿ ಯುಪಿಐ ವಹಿವಾಟುಗಳು ನಡೆದಿದ್ದು, ಅವುಗಳ ಒಟ್ಟು ಮೌಲ್ಯವನ್ನು 29.9 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.






