ಕರಾವಳಿ

ಧರ್ಮಸ್ಥಳ ಪ್ರಕರಣಗಳ ತನಿಖೆ ಸಮಗ್ರವಾಗಿಲ್ಲ: ಮಹಿಳಾ  ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ SIT ವಿರುದ್ಧ ಗಂಭೀರ ಆರೋಪ

Views: 94

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಸುತ್ತಮುತ್ತ ಕಳೆದ 20 ವರ್ಷಗಳಲ್ಲಿ ನಡೆದ ಮಹಿಳೆಯರ ನಾಪತ್ತೆ. ವಿದ್ಯಾರ್ಥಿನಿಯರ ಕಾಣೆಯಾಗುವಿಕೆ, ಅಸ್ವಾಭಾವಿಕ ಸಾವುಗಳು, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (SIT) ಸಮಗ್ರವಾಗಿ ತನಿಖೆ ನಡೆಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಗಂಭೀರ ಆರೋಪ ಮಾಡಿದ್ದಾರೆ.

SIT ಮುಖ್ಯಸ್ಥರಿಗೆ ಪತ್ರ ಬರೆದಿರುವ ಡಾ. ನಾಗಲಕ್ಷ್ಮೀ, “SIT ತಂಡವು ಚಿನ್ನಯ್ಯ ಎಂಬಾತನ ಹೇಳಿಕೆಯನ್ನು ಆಧರಿಸಿ ಮಾನವ ಕಳೇಬರಗಳ ಉತ್ಪನನಕ್ಕೆ ಮಾತ್ರ ಸೀಮಿತವಾಗಿದೆ. ಆತನ ಹೇಳಿಕೆಯ ಮಿತಿಯೊಳಗೆ ಮಾತ್ರ ತನಿಖೆ ನಡೆಸಲಾಗುತ್ತಿದೆ. ನಾಪತ್ತೆಯಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರು, ಅಸ್ವಾಭಾವಿಕ ಸಾವು. ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆದಿದೆಯೇ?” ಎಂದು ಪ್ರಶ್ನಿಸಿದ್ದಾರೆ.

SIT ರಚನೆಯಾದಾಗಿನಿಂದಲೂ ತನಿಖೆಯು ಚಿನ್ನಯ್ಯನ ಹೇಳಿಕೆಗಷ್ಟೇ ಸೀಮಿತವಾಗಿದೆ. ಉತ್ಪನನದ ಸಂದರ್ಭದಲ್ಲಿ ದೊರೆತ ಅಸ್ಥಿಪಂಜರಗಳು ಮತ್ತು ಸಾವಿಗೆ ಕಾರಣಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇವುಗಳಲ್ಲಿ ಮಹಿಳೆಯರ ಅಸ್ಥಿಪಂಜರಗಳನ್ನು ಗುರುತಿಸುವ ಕೆಲಸವಾಗಿದೆಯೇ? ಕಾಡಿನಲ್ಲಿ ದೊರೆತ ಅಸ್ಥಿಪಂಜರಗಳ ಬಗ್ಗೆ ಯಾವುದೇ ತನಿಖೆ ನಡೆಸಲಾಗಿದೆಯೇ? ನಡೆಸಿದ್ದರೆ, ಈ ಕುರಿತು ಮಾಹಿತಿಗಳನ್ನು ಆಯೋಗಕ್ಕೆ ಸಲ್ಲಿಸಬೇಕು” ಎಂದು ಅವರು ಸೂಚಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ SIT ಇದುವರೆಗೆ ಕೈಗೊಂಡಿರುವ ತನಿಖೆಯ ಸಮಗ್ರ ಮಾಹಿತಿಯನ್ನು ಆಯೋಗಕ್ಕೆ ಒದಗಿಸುವಂತೆ ಡಾ. ನಾಗಲಕ್ಷ್ಮೀ ನಿರ್ದೇಶನ ನೀಡಿದ್ದಾರೆ.

Related Articles

Back to top button