ವಸತಿ ಶಾಲೆಯಲ್ಲಿ ಅಗ್ನಿ ದುರಂತ 2ನೇ ತರಗತಿ ವಿದ್ಯಾರ್ಥಿ ಸಜೀವ ದಹನ

Views: 93
ಕನ್ನಡ ಕರಾವಳಿ ಸುದ್ದಿ: ಮಡಿಕೇರಿಯ ವಸತಿ ಶಾಲೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 2ನೇ ತರಗತಿಯ ಬಾಲಕನೋರ್ವ ಸಜೀವ ದಹನವಾಗಿರುವ ಹೃದಯವಿದ್ರಾವಕ ಘಟನೆ ಕಾಟಗೇರಿ ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದಲ್ಲಿರುವ ಹರ್ ಮಂದಿರ್ ಆಶ್ರಮ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಚೆಟ್ಟಿಮಾನಿಯ ಅನಿಲ್ ಕುಮಾರ್ ಮತ್ತು ತ್ರಿವೇಣಿ ದಂಪತಿಯ ಏಳು ವರ್ಷದ ಮಗ ಪುಷ್ಪಕ್ ಮೃತಪಟ್ಟಿದ್ದಾನೆ.
ಇಂದು ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಶಾಲಾ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ದಟ್ಟ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಆವರಿಸುತ್ತಿದ್ದಂತೆ, ಶಾಲೆಯಲ್ಲಿದ್ದ ಇತರ 25 ವಿದ್ಯಾರ್ಥಿಗಳು ಸಮಯಪ್ರಜ್ಞೆಯಿಂದ ಹೊರಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದರು. ಆದರೆ, ನಿದ್ದೆಯಲ್ಲಿದ್ದ ಪುಷ್ಪಕ್ ಕೋಣೆಯೊಳಗೆ ಸಿಲುಕಿಕೊಂಡಿದ್ದರಿಂದ ಬೆಂಕಿಗೆ ಆಹುತಿಯಾಗಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಇದೀಗ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಏನು ಎಂದು ತಿಳಿಯಲು ತನಿಖೆ ಆರಂಭಿಸಿದ್ದಾರೆ. ಪುಟ್ಟ ಬಾಲಕ ಪುಷ್ಪಕ್‌ನ ದುರಂತ ಸಾವು ಇಡೀ ಕಟಕೇರಿ ಗ್ರಾಮದಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ. ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.