12 ವರ್ಷದ ಹಿಂದೆ ಬಂಟ್ವಾಳದ ಬಾಲಕಿ ನಾಪತ್ತೆ: ಎಸ್‌ಐಟಿಗೆ ದೂರು

Views: 95
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ), ಬಂಟ್ವಾಳ ತಾಲ್ಲೂಕಿನ ಕಾವಳ ಮೂಡೂರು ಗ್ರಾಮದ ಬಾಲಕಿಯೊಬ್ಬಳು 2012ರಲ್ಲಿ ನಾಪತ್ತೆಯಾದ ಬಗ್ಗೆ ಬಾಲಕಿಯ ಸಹೋದರರು ಗುರುವಾರ ದೂರು ಸಲ್ಲಿಕೆ ಆಗಿದೆ. ಬಾಲಕಿ ಹೇಮಾವತಿಯ ಅಣ್ಣ ನಿತಿನ್ ದೇವಾಡಿಗ ಅವರು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ತೆರಳಿ ದೂರು ನೀಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಮ್ಮ ತಂಗಿ ಧರ್ಮಸ್ಥಳಕ್ಕೆ ಹೋಗುತ್ತೇನೆ ಎಂದು ಹೇಳಿ 12 ವರ್ಷ ಹಿಂದೆ ಮನೆ ಸಮೀಪದ ಮಹಿಳೆಯೊಬ್ಬರ ಜೊತೆ ಹೋಗಿದ್ದವಳು ಇವರೆಗೂ ಮನೆಗೆ ಮರಳಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆವು. ಆದರೆ ಅವರು ದೂರು ಸ್ವೀಕರಿಸಿಲ್ಲ. ದೂರು ನೀಡಿದ ಕುರಿತ ದಾಖಲಾತಿಗಳೂ ಈಗ ನಮ್ಮಲ್ಲಿ ಇಲ್ಲ. ಕಾಣೆಯಾದಾಗ ತಂಗಿಗೆ 17 ವರ್ಷ’ ಎಂದು ಮಾಹಿತಿ ನೀಡಿದರು.
‘ಧರ್ಮಸ್ಥಳಕ್ಕೆ ತೆರಳಿದ್ದಾಗ ಕಾಣೆಯಾಗಿರುವವರ ಬಗ್ಗೆ ಮಾಹಿತಿ ಇದ್ದರೆ ಹಂಚಿಕೊಳ್ಳುವಂತೆ ಎಸ್‌ಐಟಿಯವರು ಪ್ರಕಟಣೆ ನೀಡಿದ್ದಾರೆ. ಹಾಗಾಗಿ ಎಸ್‌ಐಟಿ ಕಚೇರಿಗೆ ಬಂದು ದೂರು ನೀಡಿದ್ದೇವೆ. ತಂಗಿ ಏನಾದಳು, ಆಕೆಗೆ ಏನಾದರೂ ಹೆಚ್ಚು ಕಮ್ಮಿ ಆಗಿದೆಯೇ ಎಂಬುದು ನಮಗೆ ಗೊತ್ತಾಗಬೇಕು. ಮಗಳನ್ನು ಕಳೆದುಕೊಂಡ ನಮ್ಮ ತಾಯಿ ಈಗಲೂ ಕೊರಗುತ್ತಿದ್ದಾರೆ. ಆ ಚಿಂತೆಯಲ್ಲೇ ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ’ ಎಂದರು.
‘ತಂಗಿ ಎಂಟನೇ ತರಗತಿವರೆಗೆ ಕಲಿತಿದ್ದಳು. ಬಳಿಕ ಓದನ್ನು ಅರ್ಧದಲ್ಲೇ ತ್ಯಜಿಸಿ, ಮನೆಯಲ್ಲಿ ಬೀಡಿ ಕಟ್ಟುತ್ತಿದ್ದಳು. ಆಕೆ ಬಳಿ ಮೊಬೈಲ್ ಇರಲಿಲ್ಲ. ಆಕೆಯನ್ನು ಕರೆದೊಯ್ದಿದ್ದ ಮನೆಯ ಸಮೀಪದ ಮಹಿಳೆ ನನಗೆ ಫೋನ್ ಮಾಡಿ, ‘ತಂಗಿಯನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ’ ಎಂದು ತಿಳಿಸಿದ್ದರು. ಆ ಮಹಿಳೆ ಅಲ್ಲಿಂದ ಮರಳಿದ ಬಳಿಕ ತಂಗಿಯ ಸುಳಿವಿಲ್ಲ. ಆ ಮಹಿಳೆ ಬಳಿ ವಿಚಾರಿಸಿದಾಗ, ‘ನನಗೆ ಏನೂ ಗೊತ್ತಿಲ್ಲ’ ಎಂದೇ ಹೇಳಿದ್ದರು. ಅವರು ಈಗ ನಮ್ಮ ಜೊತೆ ಮಾತನಾಡುತ್ತಿಲ್ಲ’ ಎಂದು ತಿಳಿಸಿದ್ದಳು. ನಿತಿನ್ ಅವರ ಸೋದರ ನಿತೇಶ್ ದೇವಾಡಿಗ ಕೂಡಾ ಜೊತೆಯಲ್ಲಿದ್ದರು.
‘ಸಹೋದರಿಯು ಧರ್ಮಸ್ಥಳ ದೇವಸ್ಥಾನಕ್ಕೆ 2012ರಲ್ಲಿ ತೆರಳಿದ್ದು, ಬಳಿಕ ಮನೆಗೆ ಹಿಂತಿರುಗಿಲ್ಲ. ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಎಂದು ನಿವಾಸಿ ನಿತಿನ್ ದೇವಾಡಿಗ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.