ಧರ್ಮಸ್ಥಳದಲ್ಲಿ ಅನಾಮಿಕ ಮತ್ತಷ್ಟೂ ಹೊಸ ಜಾಗ ತೋರಿಸುತ್ತಿದ್ದಾನೆ…! ಸಿದ್ದು, ಪರಂ ಭೇಟಿಯಾದ ಎಸ್‌ಐಟಿ ಅಧಿಕಾರಿಗಳು

Views: 170
ಕನ್ನಡ ಕರಾವಳಿ ಸುದ್ದಿ: ಕಳೆದ ಎರಡು ವಾರದಿಂದ ಧರ್ಮಸ್ಥಳದಲ್ಲಿಯೇ ಬೀಡು ಬಿಟ್ಟಿದ್ದ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ, ಬುಧವಾರ ಬೆಂಗಳೂರಿಗೆ ವಾಪಸಾಗಿದ್ದಾರೆ.
15ರಿಂದ 16 ಕಡೆ ಗುಂಡಿ ತೋಡಿದರೂ, ಅನಾಮಿಕ ವ್ಯಕ್ತಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ಸಿಗದಿರುವುದರಿಂದ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಆಗಮಿಸಿದರು. ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರಿಗೆ ಎಸ್‌ಐಟಿ ತನಿಖೆಯ ಸದ್ಯದ ಪರಿಸ್ಥಿತಿ, ಈವರೆಗೆ ಆಗಿರುವ ವೆಚ್ಚ, ಸಿಕ್ಕಿರುವ ಸಾಕ್ಷ್ಯ, ಅನಾಮಿಕ ವ್ಯಕ್ತಿಯ ನಡೆ ಸೇರಿದಂತೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದುವರೆಗೆ ಯಾವುದೇ ಸಾಕ್ಷ್ಯ ಸಿಗದಿದ್ದರೂ ಅನಾಮಿಕ ವ್ಯಕ್ತಿ ಮತ್ತಷ್ಟೂ ಹೊಸ ಜಾಗಗಳನ್ನು ತೋರಿಸುತ್ತಿದ್ದಾನೆ. ಇದನ್ನು ಯಾವ ರೀತಿಯಲ್ಲಿ ಮುಂದುವರಿಸಬೇಕು ಎನ್ನುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ತೀವ್ರ ವಿರೋಧಕ್ಕೆ ಕಾರಣವಾಗುತ್ತಿರುವ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖಾ ಸ್ವರೂಪವನ್ನು ಬದಲಾಯಿಸಲು ವಿಶೇಷ ತನಿಖಾ ತಂಡ ತೀರ್ಮಾನಿಸಿದ್ದು, ಹೊಸ ಗುಂಡಿ ಅಗೆಯುವ ಮೊದಲು ಪೂರ್ವಾಪರ ಯೋಚಿಸಲು ತೀರ್ಮಾನಿಸಿದ್ದಾರೆ.
ಕಳೆದ ಎರಡು ವಾರಗಳಿಂದ ಅನಾಮಧೇಯ ವ್ಯಕ್ತಿ ತೋರಿಸಿದ ಕಡೆಯಲ್ಲ ಗುಂಡಿ ಅಗೆದಿದ್ದ ಎಸ್‌ಐಟಿ ತಂಡಕ್ಕೆ ಯಾವುದೇ ‘ಸಾಕ್ಷ್ಯ’ ಸಿಕ್ಕಿಲ್ಲ. ಆದ್ದರಿಂದ ಇನ್ನು ಮುಂದೆ ಅನಾಮಧೇಯ ವ್ಯಕ್ತಿ ಅಥವಾ ಬೇರೆ ಯಾರೇ ಹೊಸ ಆರೋಪಗಳನ್ನು ಮಾಡಿದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಪಡೆದು, ಪರಿಶೀಲಿಸಿ ಬಳಿಕ ಕಾರ್ಯಚರಣೆ ನಡೆಸಲು ತೀರ್ಮಾನಿಸಿದ್ದಾರೆ. ಇದರೊಂದಿಗೆ ಎಸ್‌ಐಟಿ ತನಿಖಾ ತಂಡವನ್ನು ಇನ್ನು ಎಷ್ಟು ದಿನಗಳ ಕಾಲ ಮುಂದುವರಿಸಬೇಕು ಎನ್ನುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ತನಿಖಾ ತಂಡದ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ಚರ್ಚಿಸಿದರು. ಮುಂದೆ ಯಾವ ರೀತಿಯಲ್ಲಿ ತನಿಖೆ ನಡೆಸಬೇಕು? ಎಂದು ಚರ್ಚಿಸಿದ್ದಾರೆ. ಒಂದು ಹಂತದಲ್ಲಿ ಎಸ್‌ಐಟಿಯನ್ನು ಸ್ಥಗಿತಗೊಳಿಸುವ ವಿಷಯದ ಬಗ್ಗೆಯೂ ಚರ್ಚೆಯಾಗಿದೆ. ಆದರೆ ಅನಾಮಧೇಯ ವ್ಯಕ್ತಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿರುವುದರಿಂದ, ಏಕಾಏಕಿ ಈ ತೀರ್ಮಾನ ತೆಗೆದುಕೊಂಡರೆ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಆಯಾಮದಲ್ಲಿಯೂ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.