ಮಾಜಿ ಸಚಿವ ಡಾ.ಕೆ.ಸುಧಾಕರ್ ಸೇರಿ ಮೂವರ ವಿರುದ್ಧ ದೂರು ನೀಡಿದ ಆತ್ಮಹತ್ಯೆಗೆ ಶರಣಾದ ಕಾರು ಚಾಲಕನ ಪತ್ನಿ

Views: 63
ಕನ್ನಡ ಕರಾವಳಿ ಸುದ್ದಿ: ಕಾರು ಚಾಲಕ ಬಾಬು ಎಂಬವರು ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ತಮ್ಮ ಸಾವಿಗೆ ಸಂಸದ ಡಾ.ಕೆ.ಸುಧಾಕರ್ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ. ಬಾಬು ಅವರ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಸಂಸದರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಬಾಬು ಅವರ ಪತ್ನಿ ಶಿಲ್ಪಾ ನೀಡಿದ ದೂರಿನ ಮೇರೆಗೆ ಎ1 ಆರೋಪಿಯಾಗಿ ಬಿಜೆಪಿ ಸಂಸದ ಡಾ.ಕೆ.ಸುಧಾಕರ್, ಎ2 ನಾಗೇಶ್, ಎ3 ಮಂಜುನಾಥ್ ವಿರುದ್ಧ ಬಿಎನ್ಎಸ್ ಕಾಯ್ದೆ 108, 352, 351(2) 3(5) ಎಸ್ಸಿ-ಎಸ್ಟಿ ಕಾಯ್ದೆಯ ಸೆಕ್ಸನ್ 3 ಸಬ್ (2) ಅಡಿ ಪ್ರಕರಣ ದಾಖಲಾಗಿದೆ. ಹಣ ವಂಚನೆ, ಬೆದರಿಕೆ, ಮಾನಸಿಕ ಹಿಂಸೆ, ನಿಂದನೆ, ಆತ್ಮಹತ್ಯೆಗೆ ಪ್ರೇರಣೆ ಹಾಗು ದಲಿತ ವ್ಯಕ್ತಿಯ ಮೇಲೆ ದೌರ್ಜನ್ಯ ಆರೋಪಗಳನ್ನು ಮಾಡಲಾಗಿದೆ.
ದೂರಿನಲ್ಲಿ ಏನಿದೆ : ಡಾ.ಕೆ.ಸುಧಾಕರ್, ನಾಗೇಶ್ ಮತ್ತು ಮಂಜುನಾಥ್ ಸರ್ಕಾರಿ ಕೆಲಸ ಕೊಡಿಸುವುದಾಗಿ ಬಾಬು ಅವರಿಂದ ಮೋಸದಲ್ಲಿ 35 ಲಕ್ಷ ರೂ ಹಣ ಪಡೆದಿದ್ದಾರೆ. ಆದರೆ ಕೆಲಸ ಮಾಡಿಕೊಟ್ಟಿರಲಿಲ್ಲ. ಈ ವಿಚಾರವನ್ನು ಕೇಳಿದಾಗ ನಿಂದಿಸಿ, ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿದರು. ಇದರಿಂದ ಮನನೊಂದು ಬಾಬು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಿಲ್ಪಾ ದೂರಿನಲ್ಲಿ ತಿಳಿಸಿದ್ದಾರೆ.






