ಕುಂದಾಪುರ: ಗಂಗೊಳ್ಳಿ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರ ರೋಹಿತ್ ಮೃತದೇಹ ಕೋಡಿಯಲ್ಲಿ ಪತ್ತೆ

Views: 202
ಕನ್ನಡ ಕರಾವಳಿ ಸುದ್ದಿ: ಮಂಗಳವಾರ ಬೆಳಿಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಸಿಪಾಯಿ ಸುರೇಶ ಮಾಲೀಕತ್ವದ ದೋಣಿಯಲ್ಲಿ ನಾಲ್ಕು ಜನರು ಮೀನುಗಾರರು ಹೊರಟಿದ್ದು, ಅಲೆಯ ರಭಸಕ್ಕೆ ಸಿಲುಕಿ ದೋಣಿ ಮಗುಚಿದ್ದು, ಒಬ್ಬ ಮೀನುಗಾರ ಈಜಿ ಬೇರೆ ದೋಣಿ ತಲುಪಿದ್ದು ಮೂವರು ಮೀನುಗಾರರು ಮೀನುಗಾರರು ನಾಪತ್ತೆಯಾಗಿದ್ದು,
ಹಗಲು ರಾತ್ರಿ ಹುಡುಕಾಟದಲ್ಲಿ ರೋಹಿತ್ ಎನ್ನುವವರ ಮೃತದೇಹ ಕೋಡಿ ಲೈಟ್ ಹೌಸ್ ಸಮುದ್ರ ತೀರದಲ್ಲಿ ಇಂದು ಬುಧವಾರ ಬೆಳಗಿನ ಜಾವ 4ಗಂಟೆಗೆ ಪತ್ತೆಯಾಗಿದೆ. ಇನ್ನಿಬ್ಬರಾದ ಜಗದೀಶ್, ಸುರೇಶ್ ಖಾರ್ವಿ ಮೃತದೇಹ ಪತ್ತೆಯಾಗಬೇಕಿದೆ.
ಮಂಗಳವಾರ ಘಟನಾ ಸ್ಥಳಕ್ಕೆ ಆಗಮಿಸಿದ್ದ ಸಂಸದ ಬಿ. ವೈ. ರಾಘವೇಂದ್ರ ಅವರು ಮಾತನಾಡಿ, ಇಂತಹ ಘಟನೆ ನಡೆದಿರುವುದು ವಿಷಾದನೀಯ. ಈಗಾಗಲೇ ಶಾಸಕರು, ಉಡುಪಿ ಸಂಸದರು ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ನಾನು ಕೂಡ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೇನೆ. ನಾಳೆ ಮಧ್ಯಾಹ್ನದ ತನಕ ಮೃತದೇಹವನ್ನು ಹುಡುಕುವ ಕೆಲಸ ಮಾಡಲಾಗುತ್ತದೆ. ಆಗಲೂ ಮೃತದೇಹ ಪತ್ತೆಯಾಗದಿದ್ದರೆ ಹೆಲಿಕಾಪ್ಟರ್ ಮೂಲಕ ಪತ್ತೆ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾಗಬೇಕು ಎಂದು ವಿನಂತಿಸಿದರು.