ವಕ್ವಾಡಿ ಗುರುಕುಲ ಶಾಲೆಯಲ್ಲಿ ಗುರುಪೌರ್ಣಿಮೆ ಆಚರಣೆ

Views: 219
ಕನ್ನಡ ಕರಾವಳಿ ಸುದ್ದಿ: ಗುರುಪೌರ್ಣಿಮೆಯ ವಿಶೇಷ ಕಾರ್ಯಕ್ರಮವು ವಕ್ವಾಡಿ ಗುರುಕುಲ ಶಾಲೆಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಕುಲ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿಯವರು ವಹಿಸಿದ್ದರು. ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸರಸ್ವತಿ ಮತ್ತು ವೇದವ್ಯಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡುತ್ತಾ, “ಈ ದಿನ ವೇದವ್ಯಾಸರ ಜನ್ಮದಿನವಾಗಿದೆ, ಜ್ಞಾನ ಮತ್ತು ಶ್ರದ್ಧೆಗೆ ಕೃತಜ್ಞತೆ ಸಲ್ಲಿಸುವ ಮಹತ್ವದ ದಿನವಾಗಿದೆ. ‘ಗುರು’ ಎಂಬ ಪದದ ಅರ್ಥವೇ ಗು = ಅಂಧಕಾರ, ರು = ನಿವಾರಣೆ. ಅಂದರೆ ಗುರು ಎಂದರೆ ಅಜ್ಞಾನದಿಂದ ಜ್ಞಾನಕ್ಕೆ ಕರೆದೊಯ್ಯುವ ಬೆಳಕು. ಇಂಥ ಗುರುಗಳ ಪಾತ್ರವನ್ನು ಜೀವನದಲ್ಲಿ ಅರಿತು, ಅವರ ಮಾರ್ಗದರ್ಶನದೊಂದಿಗೆ ಸಾಗಿದರೆ ಸುಂದರ ಭವಿಷ್ಯ ಕಟ್ಟಿಕೊಳ್ಳಬಹುದು” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲಾ ಪ್ರಾಂಶುಪಾಲರಾದ ಡಾ. ರೂಪ ಶೆಣೈ ಅವರು ಮಾತನಾಡಿ, “ಗುರುಪೌರ್ಣಿಮೆ ಹಿಂದೂ ಧರ್ಮ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರವಾದ ದಿನ. ವಿದ್ಯಾರ್ಥಿಗಳು ಹಾಗೂ ಭಕ್ತರು ಈ ದಿನ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಇದು ‘ಗುರುವಿನ ಪೂಜಾ ದಿನ’ ಎಂದೂ ಕರೆಯಲ್ಪಡುತ್ತದೆ. ನಿತ್ಯವೂ ಗುರುವಿನ ಮಹತ್ವ ಅರಿಯಬೇಕು. ಆಗಲೇ ಅಸಾಧ್ಯವಾದದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ರಿಜಾ ಜೈನಬ್ ನಿರೂಪಿಸಿ, ವಂದಿಸಿದರು.