ಮಂಗಳೂರು: ಪಾದಚಾರಿ ಮಹಿಳೆಯನ್ನು ಕಾಂಪೌಂಡ್‌ನಲ್ಲಿ ನೇತಾಡುವಂತೆ ಮಾಡಿದ, ನೆರೆಮನೆ ವ್ಯಕ್ತಿಯ ಕೊಲೆ ಯತ್ನ ಆರೋಪ

Views: 182
ಕನ್ನಡ ಕರಾವಳಿ ಸುದ್ದಿ: ಕಾರೊಂದು ಬೈಕ್ ಗೆ ಗುದ್ದಿ ಬಳಿಕ ಪಾದಚಾರಿ ಮಹಿಳೆಯೊಬ್ಬರನ್ನು ಎತ್ತೊಯ್ದು ರಸ್ತೆಬದಿ ಕಾಂಪೌಂಡ್‌ನಲ್ಲಿ ತಲೆಕೆಳಗಾಗಿ ನೇತಾಡುವಂತೆ ಮಾಡಿದ ಘಟನೆ ನಗರದ ಬಿಜೈ ಕಾಪಿಕಾಡ್‌ನ 6ನೇ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಪೂರ್ವದ್ವೇಷದಿಂದ ನೆರೆಮನೆ ನಿವಾಸಿಯನ್ನು ಕೊಲ್ಲುವ ಉದ್ದೇಶದಿಂದಲೇ ವ್ಯಕ್ತಿಯೊಬ್ಬ ಅವರ ಕಾರನ್ನು ಬೈಕ್‌ಗೆ ಗುದ್ದಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ
ಏನಿದು ಘಟನೆ : ಸತೀಶ್ ಕುಮಾರ್ ಕೆ.ಎಂ. ಎಂಬ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ನಮ್ಮ ನೆರೆಮನೆಯವರಾಗಿದ್ದು, ನನ್ನ ಜೊತೆ ಪೂರ್ವದ್ವೇಷವಿತ್ತು. ಅವರು ಸದಾಕಾಲ ನನ್ನ ಜೊತೆ ಜಗಳ ತೆಗೆದು ಗಲಾಟೆ ಮಾಡುತ್ತಿದ್ದರು. ಮಾ.13ರಂದು ಬೆಳಗ್ಗೆ 8.15ರ ಸುಮಾರಿಗೆ ಬಿಜೈ ಕಾಪಿಕಾಡ್‌ನ 6ನೇ ಮುಖ್ಯರಸ್ತೆಯಲ್ಲಿ ಬೈಕ್‌ನಲ್ಲಿ ನಾನು ಮನೆಯಿಂದ ಹೊರಹೋಗುವಾಗ ಸತೀಶ್ ಕುಮಾರ್ ಕಾದು ಕುಳಿತು, ಕೊಲೆ ಮಾಡುವ ಉದ್ದೇಶದಿಂದ ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಮುರಳಿ ಪ್ರಸಾದ್ ಆರೋಪಿಸಿ, ದೂರು ನೀಡಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರು ಬೈಕನ್ನು ತಳ್ಳುತ್ತಾ ಮುಂದಕ್ಕೆ ಚಲಿಸಿ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಎತ್ತೊಯ್ದು ರಸ್ತೆಬದಿಯ ಕಾಂಪೌಂಡ್‌ನಲ್ಲಿ ನೇತಾಡುವಂತೆ ಮಾಡಿದೆ. ಪರಿಣಾಮ ಮಹಿಳೆ ಹಾಗೂ ಮುರಳಿ ಪ್ರಸಾದ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, “ಈ ಬಗ್ಗೆ ಉರ್ವ ಠಾಣಾ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿ ಆರೋಪಿ ಸತೀಶ್ ಕುಮಾರ್ ಕೆ.ಎಂ. ಎಂಬಾತನನ್ನು ಬಂಧಿಸಿ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜೊತೆಗೆ ನಿರ್ಲಕ್ಷ್ಯತನದಿಂದ ಕಾರು ಚಾಲನೆ ಮಾಡಿ ಮಹಿಳೆಗೆ ಡಿಕ್ಕಿ ಹೊಡೆದ ಬಗ್ಗೆ ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ” ಎಂದು ತಿಳಿಸಿದ್ದಾರೆ