ಪಿತೃಗಳಿಗೆ ಅನ್ನ, ನೀರು ಕೊಟ್ಟು ದೈವ ಭೂತಗಳನ್ನು ಸಂತೃಪ್ತಿಪಡಿಸುವ ‘ಜಕ್ಣಿ` ಕಾರ್ಯಕ್ಕೆ ಸಕಾಲ

Views: 529
ಕುಂದಾಪುರ: ಬೇಸಿಗೆ ತಿಂಗಳ ಮೇ15 ರ ಸಂಕ್ರಮಣದಿಂದ ಜೂನ್ ತಿಂಗಳ 15 ರ ವರೆಗಿನ ಸಂಕ್ರಮಣದವರೆಗೆ ಪಿತೃಗಳಿಗೆ ಅನ್ನ, ನೀರು ಕೊಟ್ಟು ದೈವ -ಭೂತಗಳನ್ನು ಸಂತೃಪ್ತಿ ಪಡಿಸುವ ಜಕ್ಣಿ ಕಾರ್ಯಗಳಿಗೆ ಈ ಅವಧಿಯೇ ಸಕಾಲವಾಗಿದೆ.
ಕುಂದಾಪುರ ಭಾಷೆ ಮಾತನಾಡುವ ಬ್ರಹ್ಮಾವರ ಮಾಬುಕಳದಿಂದ ಬೈಂದೂರಿನ ಶಿರೂರು ವರೆಗೆ ದೈವಭೂತಗಳಿಗೆ ಸಂತೃಪ್ತಿಪಡಿಸುವ ದೈವ ಕಾರ್ಯಕ್ಕೆ ಜಕ್ಣಿ, ಭೋಗ, ರಾವು ತೆಗೆಯೂದು, ದೈವ ಪೂಜೆ, ಎಂಬ ಬೇರೆ ಬೇರೆ ಹೆಸರುಗಳಿಂದ ಆಯಾ ಪ್ರದೇಶಕ್ಕೆ ಅನುಗುಣವಾಗಿ ಕರೆಯುತ್ತಾರೆ.
ಹತ್ತನಾವಧಿ ಬೇಸಿಗೆ ತಿಂಗಳ ಕೃಷಿ ಕಾರ್ಯಗಳಿಗೆ ಪೂರ್ವಸಿದ್ದತೆಯನ್ನು ನಡೆಸುವ ಕಾಲ. ಕೈಗೊಳ್ಳಲಿರುವ ಮುಂದಿನ ಕೃಷಿ ಚಟುವಟಿಕೆಗಳು ಫಲದಾಯಕವಾಗುವಲ್ಲಿ ಜಾನುವಾರು ಮನುಷ್ಯರಿಗೆ ಯಾವುದೇ ರೀತಿಯ ವಿಘ್ನಗಳು ಬಾರದಂತೆ ಕುಟುಂಬದಲ್ಲಿ ಈ ಹಿಂದೆ ಇಹ ಲೋಕ ತ್ಯಜಿಸಿದವರಿಗೆ ಸರಿಯಾಗಿ ಅನ್ನ ನೀರು ಇಲ್ಲದೆ ದೈವರೂಪದಲ್ಲಿ ಬಂದು ಯಾರಿಗೂ ಉಪದ್ರ ಕೊಡುವುದು ಬೇಡ ಎಂಬ ನಂಬಿಕೆ
ದೈವಗಳು ದೈವಸ್ಥಾನ ಬಿಟ್ಟು ಹೋಗುವುದರೊಳಗೆ ಬಹಳ ತರಾತುರಿಯಲ್ಲಿ ಮಾಡುವ ದೈವ ಕಾರ್ಯಗಳಾದ ಜಕ್ಣಿ ಈ ಪ್ರದೇಶದಲ್ಲಿ ಈಗಲೂ ಸಂಪ್ರದಾಯಬದ್ದವಾಗಿ ಆಚರಿಸಿಕೊಂಡು ಬಂದಿದ್ದಾರೆ.
ತರಾತುರಿಯಲ್ಲಿ ಜಕ್ಣಿ ಯಾಕೆ…?
ಬೇಸಿಗೆ ನಂತರ ಕಾರ್ ತಿಂಗಳು (ಜೂನ್) ಆಸಾಡಿ ತಿಂಗಳಲ್ಲಿ (ಜುಲೈ) ದೈವ ಭೂತಗಳು ದೈವಸ್ಥಾನದಲ್ಲಿ ಇರುವುದಿಲ್ಲ. ಪ್ರತಿ ವರ್ಷ ಸಮುದ್ರದ ಆಚೆ ಪ್ರಯಾಣಿಸುವುದರಿಂದ ಯಾವುದೇ ದೈವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಆ ದೈವಗಳು ವಾಪಾಸು ಬರುವುದೇ ಸೋಣೆ ತಿಂಗಳು (ಅಗಸ್ಟ್) ಆದ್ದರಿಂದ ಅಷ್ಟು ತರಾತುರಿಯಲ್ಲಿ ಜಕ್ಣಿ ಮಾಡುವುದರ ಮುಖಾಂತರ ಅವರನ್ನು ಕಳುಹಿಸುವ ಪರಿಯಾಗಿದೆ.
ದೈವ ಭೂತಗಳಿಗೆ ರಕ್ತಹಾರ ನೀಡಿ ಮಾಂಸಹಾರ ಕ್ರಮದಲ್ಲಿ ಜಕ್ಣಿ ಮಾಡುವುದೇ ಜಾಸ್ತಿ. ಅಪರೂಪದಲ್ಲಿ ದೈವಗಳಿಗೆ ಹಾಲು ಹಣ್ಣು ಒಪ್ಪಿಸಿ ಕುಂಬಳಕಾಯಿ ಕತ್ತರಿಸುವುದರ ಮೂಲಕ ಸಂತೃಪ್ತಿ ಪಡಿಸುತ್ತಾರೆ. ಸಸ್ಯಹಾರಿ ತಿನ್ನುವವರು ದೈವಗಳಿಗೆ ರಕ್ತ ಆಹಾರ ನೀಡುವ ಕ್ರಮವು ಇದೆ, ಮಾಂಸಹಾರಿ ದೈವಗಳಿಗೆ ರಕ್ತಹಾರಕ್ಕಾಗಿ ಊರಿನ ಗಂಡು ಕೋಳಿ (ಹುಂಜ)ಗೆ ಹೆಚ್ಚಿನ ಪ್ರಧಾನ್ಯತೆ, ಜೊತೆಗೆ ಅಡಿಕೆ ಹಾಳಿ ಕೊಟ್ಟೆ ಮಾಡಿ ಅದಕ್ಕೆ ಕೆಂಪು ಹಳದಿ, ಕಪ್ಪು, ಹಾನಮಾಡಿ (ಬಣ್ಣದ ನೀರು) ನೆಣೆ ಬತ್ತಿ ಇಟ್ಟು ಪೂಜೆ ಮಾಡಿ ಕೋಳಿ ಕೊಯ್ಯುತ್ತಾರೆ. ಇನ್ನೂ ಘಟಾನುಘಟಿ ದೈವಗಳಿಗೆ ಬೇಡಿಕೆ ಇದ್ದರೆ ಕುರಿ ಕಡಿಯೂದು ಉಂಟು.
ಮೀಸಲು ಹಾಕಿಯೇ ಊಟ
ಮನೆಯಲ್ಲಿಯೇ ಹಲಸಿನ ಹಣ್ಣಿನ ಕಡಬು, ಕೋಳಿ, ಮೀನಿನ ಸಾರು, ಶೇಂದಿ, ಹೆಣ್ಣು ದೈವವಾದರೆ ಕೆಂಪು ಜರಿ ಸೀರೆಯನ್ನು ಮಣೆಯ ಮೇಲಿಟ್ಟು ಮೀಸಲು ಹಾಕಿ ಎಲ್ಲಾ ನೆಂಟರಿಷ್ಟರು ಸೇರಿಸಿ ಊಟ ಮಾಡು ಪದ್ಧತಿ ಇವತ್ತಿಗೂ ಇದೆ.
ಜಕ್ಣಿ ಆಗದೇ ಮನೆಯಲ್ಲಿ ಹಾಗೂಎಲ್ಲಿಯೂ ಹಲಸಿನ ಹಣ್ಣು ಕಡಬು ತಿನ್ನ ಬಾರದು, ಮತ್ತೆಲ್ಲಿಯಾದರೂ ಜಕ್ಣಿ ಮಾಡುವಾಗ ಅಶುದ್ದವಾದರೆ ಅದರ ಪರಿಣಾಮ ಕಂಡು ಬರುವುದೇ ಮನುಷ್ಯನಿಗೆ ಮತ್ತು ಜಾನುವಾರು ಕೊಟ್ಟಿಗೆಯಲ್ಲಿ ದನ ಕರುಗಳು ತಮ್ಮ ಕಾಲುಗಳಿಗೆ ಊನವಾಗುತ್ತದೆ. ಕೃಷಿ ಭೂಮಿ ಊಳುವಾಗ ಕೋಣಗಳಿಗೆ ಶಡಿ ಉಂಟಾಗುತ್ತದೆ ಎಂಬ ಕುರುಹು ಇದರಿಂದಲೇ ಗೊತ್ತಾಗಿ ಬಿಡುತ್ತದೆ ಎಂಬ ನಂಬಿಕೆ.
ಪುನಃ ದೈವಸ್ಥಾನದಲ್ಲಿ ದೈವಗಳನ್ನು ಕಾಣಬೇಕಾದರೆ ಸೋಣೆ ತಿಂಗಳು ಅಗಸ್ಟ್ 15 ರ ನಂತರದ ಸಂಕ್ರಮಣ ಕಾಲದಲ್ಲಿ ಎಂದಿನಂತೆ ದೈವಗಳು ತಮ್ಮ ಯಥಾ ಸ್ಥಾನವನ್ನು ಸೇರಿಕೊಂಡು ಅಲ್ಲಿಂದಲೇ ಮಾಡಿದ ಪೂಜೆ ಪುನಸ್ಕಾರಗಳನ್ನು ಸ್ವೀಕರಿಸುತ್ತದೆ ಎಂಬ ಪ್ರತೀತಿ. -ಸುಧಾಕರ ವಕ್ವಾಡಿ






