ಕರಾವಳಿ

ಕುಂದಾಪುರ: ಕುಂಭಾಸಿಯಲ್ಲಿ ಇನ್ನೋವಾ ಕಾರಿಗೆ ಇನ್ಸುಲೇಟರ್ ಡಿಕ್ಕಿ: ಎಲ್ಲಾ ಗಾಯಾಳುಗಳು ಪ್ರಾಣಾಪಾಯದಿಂದ ಪಾರು

Views: 196

ಕನ್ನಡ ಕರಾವಳಿ ಸುದ್ದಿ: ರಿವರ್ಸ್ ಬರುತ್ತಿದ್ದ ಇನ್ನೋವಾ ಕಾರಿಗೆ ವೇಗವಾಗಿ ಬಂದ ಟ್ರಕ್ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 7 ಮಂದಿ ಗಾಯಗೊಂಡಿರುವ ಗುರುವಾರ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಭಾಸಿ ಸಮೀಪದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರುಗಡೆ ನಡೆದಿದ್ದು, ಪರಿಣಾಮ ಇನ್ನೋವಾ ಕಾರಿನಲ್ಲಿದ್ದ ಏಳೂ ಜನ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು, ಇನ್ಸುಲೇಟರ್ ವಾಹನದಲ್ಲಿದ್ದ ಚಾಲಕನೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇರಳ ಮೂಲದ ಇನ್ನೋವಾ ಕಾರಿನಲ್ಲಿ ಏಳು ಜನ ಪ್ರವಾಸಕ್ಕೆಂದು ಬಂದಿದ್ದರು. ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಕುಂಭಾಸಿಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರಗೋಪುರದ ಬಳಿ ಪಾಸ್ ಆಗುತ್ತಿದ್ದಂತೆ ದೇವಸ್ಥಾನಕ್ಕೆ ಹೋಗಲೆಂದು ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದರೆನ್ನಲಾಗಿದೆ.

ಇದೇ ಸಂದರ್ಭ ಗೋವಾ ಕಡೆಯಿಂದ ಮೀನು ತುಂಬಿಸಿಕೊಂಡು ಕೇರಳ ಕಡೆಗೆ ಪ್ರಯಾಣಸುತ್ತಿದ್ದ  ಇನ್ಸುಲೇಟರ್ ವಾಹನ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇನ್ನೋವಾ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಇನ್ಸುಲೇಟರ್ ವಾಹನ ಪಲ್ಟಿಯಾಗಿ ಬಿದ್ದಿದೆ.

ಅಪಘಾತದ ಭೀಕರತೆ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಎಲ್ಲಾ ಕಡೆಗಳಲ್ಲೂ ವೈರಲ್ ಆಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಕೇರಳದ ಪಯ್ಯನೂರು ಮೂಲದ ನಾರಾಯಣನ್‌, ವಾತ್ಸಲ, ಅನಿತಾ, ಚೈತ್ರಾ ಅವರು ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇನ್ನುಳಿದ ಗಾಯಾಳು ಮಧುಸೂದನ್‌, ಭಾರ್ಗವನ್‌, ಚಾಲಕ ಫೈಝಲ್‌ ಹಾಗೂ ಇನ್ಸುಲೇಟರ್‌ ಚಾಲಕ ಹೊನ್ನಾವರದ ಮಹೇಶ್‌ ಗಾಯಾಳುಗಳು ಕೂಡಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

 

Related Articles

Back to top button