ಕರಾವಳಿ

ಉಡುಪಿ; ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ:ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ,ದಂಡ

Views: 147

ಉಡುಪಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ, ದಂಡ ವಿಧಿಸಲಾಗಿದೆ.

ಬ್ರಹ್ಮಾವರದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು 2023ರ ಎಪ್ರಿಲ್‌ನಲ್ಲಿ ಶಿವಮೊಗ್ಗ ಮೂಲದ 27 ವರ್ಷದ ವ್ಯಕ್ತಿ ಬಂದಿದ್ದ. ಕಾರ್ಯಕ್ರಮದ ಬಳಿಕ ಬಾಲಕಿ ವಾಸವಿದ್ದ ಮನೆಯಲ್ಲೇ ಕೆಲವು ದಿನಗಳ ಕಾಲ ನೆಲೆಸಿದ್ದ ಆತ ಈ ಅವಧಿಯಲ್ಲಿ ದೌರ್ಜನ್ಯ ಎಸಗಿ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಕೆಲವು ದಿನಗಳ ಬಳಿಕ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದಾಗ ಗರ್ಭಿಣಿ ಎಂದು ತಿಳಿದು ಬಂದಿತ್ತು. ಆಕೆಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ದೂರಿನಂತೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಉಡುಪಿ ಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಜಯಾನಂದ ಕೆ. ಅವರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಒಟ್ಟು 36 ಸಾಕ್ಷಿಗಳ ಪೈಕಿ 20 ಸಾಕ್ಷಿದಾರರ ವಿಚಾರಣೆ ನಡೆಸಿದ್ದು ಮುಖ್ಯವಾಗಿ ಬಾಲಕಿಯ ಸಾಕ್ಷಿ ಮತ್ತು ಡಿಎನ್‌ಎ ವರದಿಯಲ್ಲಿ ಆರೋಪಿಯು ನೊಂದ ಬಾಲಕಿಯ ಗರ್ಭಕ್ಕೆ ಕಾರಣವಾಗಿರುವ ಬಗ್ಗೆ ಪೂರಕ ಸಾಕ್ಷಿ ಪರಿಗಣಿಸಿ ಇಬ್ಬರ ವಾದ ಆಲಿಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ಆರೋಪಿಯ ಆರೋಪ ಸಾಬೀತಾಗಿದೆ.

ಆರೋಪಿಗೆ 20 ವರ್ಷ ಅವಧಿಗೆ ಕಠಿಣ ಜೈಲು ಶಿಕ್ಷೆ, 21 ಸಾವಿರ ದಂಡ, ದಂಡದಲ್ಲಿ 15 ಸಾವಿರ ನೊಂದ ಬಾಲಕಿಗೆ ಮತ್ತು 6 ಸಾವಿರ ಸರಕಾರಕ್ಕೆ ಪಾವತಿಸುವಂತೆ ಮತ್ತು ಸರಕಾರದಿಂದ ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶ ನೀಡಿದರು.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು. 2024ರ ಡಿಸೆಂಬರ್‌ನಲ್ಲಿ ದೋಷರೋಪಣೆ ಸಲ್ಲಿಸಲಾಗಿತ್ತು. 10 ತಿಂಗಳೊಳಗೆ ಪ್ರಕರಣ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!