ಕುಂದಾಪುರ: ಗಂಗೊಳ್ಳಿ ಶ್ರೀ ಮಹಾಂಕಾಳಿ ದೇಗುಲದ ಅರ್ಚಕ ಕಳವು ಮಾಡಿ ವಿವಿಧೆಡೆ ಅಡವಿಟ್ಟಿದ್ದ 20 ಲಕ್ಷ ರೂ.ಚಿನ್ನಾಭರಣ ವಶಕ್ಕೆ

Views: 135
ಕುಂದಾಪುರ: ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ ದೇವರ ಮೇಲಿದ್ದ ಚಿನ್ನಾಭರಣಗಳನ್ನು ಪೂಜೆ ಮಾಡುವ ಅರ್ಚಕ ಕಳವು ಮಾಡಿ ವಿವಿಧೆಡೆ ಅಡವಿಟ್ಟಿದ್ದ ಒಟ್ಟು 20.48 ಲಕ್ಷ ರೂ. ಮೌಲ್ಯದ 256 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕ ಶಿರಸಿ ಮೂಲದ ನರಸಿಂಹ ಭಟ್ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗಂಗೊಳ್ಳಿ ಠಾಣಾ ಎಸ್‌ಐಗಳಾದ ಹರೀಶ್ ಆರ್., ಬಸವರಾಜ ಕನಶೆಟ್ಟಿ, ಸಿಬಂದಿ ನಾಗರಾಜ, ಶಾಂತರಾಮ ಶೆಟ್ಟಿ, ರಾಘವೇಂದ್ರ, ಸಂದೀಪ ಕುರಣಿ ಹಾಗೂ ಚಾಲಕ ದಿನೇಶ ಅವರ ತಂಡವು ವಿಚಾರಣೆ ನಡೆಸಿ, ಆರೋಪಿಯು ಅಡವಿಟ್ಟಿದ್ದ ವಿವಿಧ ಬ್ಯಾಂಕ್, ಸಹಕಾರ ಸಂಘಗಳಲ್ಲಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೆ.21ರಂದು ಈ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯು ದೇವರ ಮೇಲಿದ್ದ ಚಿನ್ನಾಭರಣಗಳನ್ನು ತೆಗೆದು, ನಕಲಿ ಚಿನ್ನಾಭರಣಗಳನ್ನು ಹಾಕಿದ್ದಾನೆ. ಚಿನ್ನಾಭರಣಗಳನ್ನು ಆತ ಕುಂದಾಪುರ, ಬೈಂದೂರು ಭಾಗದ ವಿವಿಧ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಅಡವಿಟ್ಟಿರುವುದಾಗಿ ಬಾಯಿಬಿಟ್ಟಿದ್ದು, ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಗಂಗೊಳ್ಳಿ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.






