ಕುಶಾಲನಗರ: ಕೊಟ್ಟ ಸಾಲದ ಬಗ್ಗೆ ವಿವಾದ ನಡೆದು ಕೊಡಲಿಯಿಂದ ಕಡಿದು ಇಬ್ಬರ ಭೀಕರ ಕೊಲೆ,ಆರೋಪಿ ಸೆರೆ

Views: 68
ಮಡಿಕೇರಿ: ಕುಶಾಲನಗರದ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ಕೊಟ್ಟ ಸಾಲದ ಬಗ್ಗೆ ನಡೆದ ವಿವಾದದಲ್ಲಿ ಇಬ್ಬರನ್ನು ಕೊಡಲಿಯಿಂದ ಕಡಿದುಕೊಂದ ಘಟನೆ ನಡೆದಿದೆ.
ಆರೋಪಿ ಗಿರೀಶ್(29) ಬಂಧಿತ ಆರೋಪಿ
ಬಸವೇಶ್ವರ ಬಡಾವಣೆ ನಿವಾಸಿ ಜೋಸೆಫ್ (55) ಸ್ಥಳದಲ್ಲೇ ಮೃತಪಟ್ಟಿದ್ದು, ಸುಂದರನಗರ ನಿವಾಸಿ ವಸಂತ (46) ಅವರು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದ ಜೋಸೆಫ್ ಹಾಗೂ ವಸಂತ ಅವರು ಮನೆಯ ಬಳಿ ಇದ್ದಾಗ ಗಿರೀಶ್ ಬಂದು, ಈ ಹಿಂದೆ ಮಾಡಿದ ಕೆಲಸದ ಬಾಕಿ ಹಣ ನೀಡುವಂತೆ ಜೋಸೆಫ್ ಅವರಲ್ಲಿ ಕೇಳಿದ್ದ. ಅದಕ್ಕೆ, ತಾನು ಯಾವುದೇ ಹಣ ನೀಡಲು ಬಾಕಿ ಇರುವುದಿಲ್ಲ ಎಂದು ಜೋಸೆಫ್ ಹೇಳಿದಾಗ ಕೋಪಗೊಂಡ ಗಿರೀಶ್ ತನ್ನ ಮನೆಗೆ ಹೋಗಿ ಕೊಡಲಿ ತಂದು ಹಿಂದಿನಿಂದ ಬಂದು ಕೊಡಲಿಯಿಂದ ಜೋಸೆಫ್ನ ಕುತ್ತಿಗೆಗೆ ಕೊಚ್ಚಿದ್ದಾನೆ. ಒಂದೇ ಏಟಿಗೆ ತೀವ್ರ ರಕ್ತಸ್ರಾವವಾಗಿ ಜೋಸೆಫ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಗಿರೀಶ ಮನಸೋಇಚ್ಛೆ ಮೂರು ನಾಲ್ಕು ಬಾರಿ ಕೊಡಲಿಯಿಂದ ಕೊಚ್ಚಿದ್ದಾನೆ. ಇದರಿಂದ ರಕ್ತದ ಕೋಡಿಯೇ ಹರಿದಿದೆ.
ಜೋಸೆಫ್‌ನ ಜೊತೆಯಲ್ಲೇ ಇದ್ದ ಆತನ ಅಣ್ಣನ ಮಗ ವಸಂತ ಈ ಗಲಾಟೆಯನ್ನು ಬಿಡಿಸಲು ಹೋಗಿದ್ದಾನೆ. ಆದರೆ ಗಿರೀಶ್ ವಸಂತನಿಗೂ ಕೊಡಲಿಯಿಂದ ತಲೆಗೆ ಭೀಕರವಾಗಿ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ವಸಂತ ತಲೆಗೆ ಕೊಡಲಿ ಹೊಕ್ಕಿ ಅದು ಅಲ್ಲಿಯೇ ಉಳಿದುಬಿಟ್ಟಿದೆ. ಜೋಸೆಫ್ ಸ್ಥಳದಲ್ಲಿಯೇ ಪ್ರಾಣಬಿಟ್ಟರೆ, ಭೀಕರವಾಗಿ ಗಾಯಗೊಂಡಿದ್ದ ವಸಂತನನ್ನು ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆ ನಡೆಯುತ್ತಿದ್ದಂತೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಸಿಪಿಐ ರಾಜೇಶ್ ಕೆ., ಪಿಎಸ್‌ಐ ಮೋಹನ್‌ರಾಜು ಪಿ. ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.






