ಶಿರೂರು:ತಂದೆಯ ಮೂಳೆಯನ್ನಾದರೂ ಹುಡುಕಿಕೊಡುವಂತೆ ನಾಪತ್ತೆಯಾದ ಜಗನ್ನಾಥ ಮಗಳ ಒತ್ತಾಯ

Views: 99
ಉತ್ತರ ಕನ್ನಡ :ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತ ಮಾಡಬಾರದು. ನಮ್ಮ ತಂದೆಯ ಮೃತದೇಹ ಹೊರತೆಗೆಯಬೇಕು. ಕೊನೆಯ ಪಕ್ಷ ಒಂದು ಮೂಳೆಯಾದರೂ ನಮಗೆ ಬೇಕು. ನಮಗೆ ತಂದೆಯ ಮರಣ ದಾಖಲೆ ಕೂಡ ನೀಡುವುದಿಲ್ಲ ಎನ್ನುವುದು ಸರಿಯಲ್ಲ. ಈ ಕಾರ್ಯಾಚರಣೆ ಮೂಲಕ ನಮ್ಮವರನ್ನು ಪತ್ತೆಮಾಡಬೇಕು ಎಂದು ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಮಗಳು ಕೃತಿಕಾ ನಾಯ್ಕ ಒತ್ತಾಯಿಸಿದ್ದಾರೆ.
ನಾಪತ್ತೆಯಾಗಿದ್ದ ಸ್ಥಳೀಯರಿಬ್ಬರ ಕಳೆಬರಹ ಪತ್ತೆಯಾಗಿಲ್ಲ ಆದರೆ, ಇನ್ನೂ ಕೂಡ ನಾಪತ್ತೆಯಾಗಿರುವ ಹೋಟೆಲ್ ನಲ್ಲಿದ್ದ ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಹೋಟೆಲ್ಲಿಗೆ ಆಗಮಿಸಿದ್ದರು ಎನ್ನಲಾದ ಲೋಕೇಶ್ ನಾಯ್ಕ ಪತ್ತೆಯಾಗಿಲ್ಲ. ಸದ್ಯ ಡ್ರೆಜ್ಜಿಂಗ್ ಯಂತ್ರದ ಮೂಲಕ ಕಾರ್ಯಾಚರಣೆ ನಡೆದಿದೆಯಾದರೂ, ಈವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಶಿರೂರು ಬಳಿ ಬೃಹತ್ ಗುಡ್ಡ ಕುಸಿದು ನಾಪತ್ತೆಯಾಗಿದ್ದ ಚಾಲಕ ಸಹಿತ ಭಾರತ್ ಬೆಂಜ್ ಲಾರಿ ಬುಧವಾರ ಪತ್ತೆಯಾಗಿದೆ. ಆದರೆ ನಾಪತ್ತೆಯಾಗಿರುವ ಇನ್ನುಳಿದ ಇಬ್ಬರು ಕುಟುಂಬಸ್ಥರಿಗೆ ಕಾರ್ಯಾಚರಣೆ ಸ್ಥಗಿತಗೊಳ್ಳುವ ಆತಂಕ ಕಾಡತೊಡಗಿದ್ದು, ತಂದೆಯ ಮೂಳೆಗಳನ್ನಾದರೂ ಹುಡುಕಿಕೊಡುವಂತೆ ಮಗಳು ಒತ್ತಾಯಿಸಿದ್ದಾರೆ.
ಜು.16 ರಂದು ಮುಂಜಾನೆ ಅಂಕೋಲಾದ ಶಿರೂರು ಬಳಿ ಸಂಭವಿಸಿದ ಬೃಹತ್ ಗುಡ್ಡ ಕುಸಿತದ ವೇಳೆ ಲಾರಿಯಲ್ಲಿದ್ದ ಕೇರಳ ಮೂಲದ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಬುಧವಾರ ನಡೆದ ಕಾರ್ಯಾಚರಣೆ ವೇಳೆ ಭಾರತ್ ಬೆಂಜ್ ಲಾರಿಯನ್ನು ಗೋವಾದ ಡ್ರೆಜ್ಜಿಂಗ್ ಯಂತ್ರದಲ್ಲಿರುವ ಕ್ರೇನ್ ಮೂಲಕ ಹೊರತೆಗೆದಿದ್ದು, ಅರ್ಜುನ್ ಮೃತದೇಹ ಕೂಡ ಲಾರಿಯ ಕ್ಯಾಬಿನ್ನಲ್ಲಿಯೇ ಪತ್ತೆಯಾಗಿದೆ. ಇದರೊಂದಿಗೆ 72 ದಿನಗಳ ಬಳಿಕ ಅರ್ಜುನ್ ಹಾಗೂ ಲಾರಿಯ ಅವಶೇಷಗಳು ಪತ್ತೆಯಾಗಿದ್ದು, ಲಾರಿ ಕೂಡ ಸಂಪೂರ್ಣ ನುಜ್ಜುಗುಜ್ಜಾಗಿದೆ.







