ಉಡುಪಿ: ಗಣೇಶ ಹಬ್ಬದ ದಿನದಂದು ಹಾದಿ ಬೀದಿಯಲ್ಲಿ ಯಕ್ಷಗಾನ ವೇಷ ಧರಿಸಿ ತಿರುಗಾಟಕ್ಕೆ ಹಿರಿಯ ಯಕ್ಷ ಕಲಾವಿದರ ಆಕ್ಷೇಪ!

Views: 110
ಕರಾವಳಿಯಲ್ಲಿ ಗಂಡು ಕಲೆ ಎಂದೇ ಖ್ಯಾತಿಯಾದ ಯಕ್ಷಗಾನಕ್ಕೆ ಕರಾವಳಿ ಭಾಗದಲ್ಲಿ ತನ್ನದೇ ಆದ ಮಹತ್ವ ಗೌರವವಿದೆ.ಕರಾವಳಿಯಲ್ಲಿ ಕೃಷ್ಣ ಜನ್ಮಾಷ್ಟಮಿ, ಗಣೇಶ ಚೌತಿ, ನವರಾತ್ರಿಯಂದು ಹುಲಿವೇಷಗಳೊಂದಿಗೆ ವಿಭಿನ್ನ ವೇಷಗಳಲ್ಲಿ ಯಕ್ಷಗಾನ ವೇಷವೂ ಕಾಣಸಿಗುತ್ತೆ. ಆದ್ರೆ ಈಗ ಯಕ್ಷಗಾನ ವೇಷ ಹಾಕುವುದಕ್ಕೆ ಯಕ್ಷಗಾನ ಹಿರಿಯ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದಾರೆ.
ನವರಾತ್ರಿ ವೇಷ ಧರಿಸಿ ಬಿಕ್ಷೆ ಬೇಡುತ್ತಿರುವ ನಕಲಿ ಕಲಾವಿದರನ್ನು ಯಕ್ಷಗಾನದ ಅಸಲಿ ಕಲಾವಿದರು ತಡೆದು ನಿಲ್ಲಿಸಿ ವೇಷ ಕಳುಚಿಸಿ ಕಳುಹಿಸಿಕೊಟ್ಟ ಪ್ರಸಂಗ ಈ ಹಿಂದೆಯೂ ನಡೆದಿದೆ.
ಇದೀಗ ಬಿಜೆಪಿಯ ಸಾಂಸ್ಕೃತಿಕ ಪ್ರಕೋಷ್ಟದ ಹಿರಿಯ ಯಕ್ಷಗಾನ ಕಲಾವಿದರೊಬ್ಬರು ಈ ಆಕ್ಷೇಪ ವ್ಯಕ್ತಪಡಿಸಿದ್ದಾರೆ
ನಾಡಿನ ಶ್ರೇಷ್ಠ ಕಲೆ ಯಕ್ಷಗಾನವನ್ನು ಹೀಗೆ ಬೀದಿಯಲ್ಲಿ ಧರಿಸಿ ಬರಬೇಡಿ ಎಂದು ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮನವಿ ಮಾಡಿದ್ದಾರೆ. ಯಕ್ಷಗಾನದ ವೇಷ ಧರಿಸಿ ಕುಡಿದು ತಿರುಗಾಡುತ್ತಾರೆ, ಚರಂಡಿಯಲ್ಲಿ ಬೀಳುತ್ತಾರೆ. ಈ ಬಗ್ಗೆ ಜನ ಕರೆ ಮಾಡಿ ಹೇಳುತ್ತಾರೆ ಎಂದು ಬೇಸರ ಹೊರಹಾಕಿದ್ದಾರೆ. ಹಬ್ಬದ ದಿನ ವೇಷ ಹಾಕುವವರು ಕಲಾವಿದರಲ್ಲ. ಸಂಪಾದನೆಗೋಸ್ಕರ ಅಡ್ಡದಾರಿ ಹಿಡಿದವರು. ಈ ಬಗ್ಗೆ ಪೊಲೀಸ್ ಇಲಾಖೆಯ ಗಮನ ಸೆಳೆದಿದ್ದೇವೆ. ಅಗತ್ಯ ಬಿದ್ದರೆ ಯಕ್ಷಗಾನ ಕಲಾವಿದರು ಕಾರ್ಯಾಚರಣೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಯಕ್ಷಗಾನ ಕಲೆಯನ್ನು, ಅದರ ಮೌಲ್ಯವನ್ನು ಉಳಿಸುವ ಕೆಲಸಕ್ಕೆ ಹಿರಿಯ ಯಕ್ಷಗಾನ ಕಲಾವಿದರು ಮುಂದಾಗಿದ್ದಾರೆ. ಯಕ್ಷಗಾನ ಇರಲಿ, ಹುಲಿವೇಷ ಇರಲಿ ಕುಡಿದು ತೂರಾಡುವುದು ಎಷ್ಟು ಸರಿ ಅನ್ನೋದು ಕಲಾವಿದರ ಪ್ರಶ್ನೆ. ಇನ್ನಾದರೂ ಹಬ್ಬ ಇರಲಿ ಇನ್ಯಾವುದೆ ಸಂದರ್ಭದಲ್ಲಿ ಯಕ್ಷಗಾನದ ಪಾವಿತ್ರ್ಯತೆ ಉಳಿಸುವ ಕಾರ್ಯ ಆಗಬೇಕಿದೆ. ಈ ಮೂಲಕ ಕರಾವಳಿ ಗಂಡುಕಲೆಯ ಪ್ರಾಮುಖ್ಯತೆ ಹಾಗೂ ಗಾಂಭೀರ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ.






