ಕರಾವಳಿ

ಕಾರ್ಕಳದಲ್ಲಿ ಯುವತಿಗೆ ಅಮಲು ಪದಾರ್ಥ ನೀಡಿ ಗ್ಯಾಂಗ್ ರೇಪ್: ಓರ್ವ ವಶಕ್ಕೆ

Views: 488

ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಗ್ಗೆ ವರದಿಯಾಗಿದೆ.

ಕಾರ್ಕಳದ ಅಯ್ಯಪ್ಪ ನಗರದ ಬಳಿಯ ಹಾಡಿಯಲ್ಲಿ ಕುಕ್ಕುಂದೂರು ಗ್ರಾಮದ 21ರ ವಯಸ್ಸಿನ ಯುವತಿಯೋರ್ವಳಿಗೆ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುಕ್ರವಾರ ಸಂಜೆಯ ಹೊತ್ತಿಗೆ ಈ ಘಟನೆ ನಡೆದಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಯುವತಿಯನ್ನು ಕಾರ್ಕಳದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

4 ಮಂದಿ ಈ ಕೃತ್ಯದಲ್ಲಿ ಬಾಗಿಯಾಗಿದ್ದು, ಇವರಲ್ಲಿ ಅಲ್ತಾಫ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜೇನು ಕೃಷಿ ಮಾಡಿಕೊಂಡಿದ್ದ ಯುವತಿಯನ್ನು ಮನೆಯ ಪಕ್ಕದ ರಂಗನಪಲ್ಕೆ ಎಂಬ ಸ್ಥಳಕ್ಕೆ ಕರೆದೊಯ್ದು ಹಾಡಿಯಲ್ಲಿ ಈ ಹೇಯ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಮೊದಲು ಯುವತಿಗೆ ಅಮಲು ಪದಾರ್ಥ ನೀಡಿ ಓರ್ವ ಅತ್ಯಾಚಾರ ಎಸಗಿದ್ದು, ನಂತರ ಇನ್ನಿಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

ಆಸ್ಪತ್ರೆ ಎದುರು ಹಿಂದೂ ಸಂಘಟನೆಯ ಕಾರ್ಯಕರ್ತರು, ಭೋವಿ ಸಮುದಾಯದವರು ಜಮಾಯಿಸಿ ಈ ಘಟನೆಯನ್ನು ಖಂಡಿಸಿದ್ದು,ಕೂಡಲೇ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

 

Related Articles

Back to top button