ಶಿರೂರು ಗುಡ್ಡ ಕುಸಿತ ದುರಂತ: ಶೋಧ ಕಾರ್ಯದಲ್ಲಿ ಲಾರಿಯ ಬಿಡಿ ಭಾಗಗಳು ಪತ್ತೆ

Views: 202
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಗಂಗಾವಳಿ ನದಿಯಲ್ಲಿ ಕಾಣೆಯಾದ ಮೂವರ ಶೋಧ ಕಾರ್ಯ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆಯವರು ಗಂಗಾವಳಿ ನದಿಯಲ್ಲಿ ಸಂಜೆ ವೇಳೆಯಲ್ಲಿ ಶೋಧಕಾರ್ಯಕ್ಕಿಳಿದಿದ್ದು, ಗ್ಯಾಸ್ ಟ್ಯಾಂಕರ್‌ನ ಬಿಡಿ ಭಾಗಗಳು ಪತ್ತೆಯಾಗಿದೆ.
ಕೇರಳದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಶವಕ್ಕಾಗಿ ಶೋಧ ನಡೆಸಬೇಕಿದ್ದು, ಇದೀಗ ಗಂಗಾವಳಿ ನದಿಯಲ್ಲಿ ಜಿಲ್ಲಾಡಳಿತದ ತಡೆಯ ಮಧ್ಯೆಯೇ ಶೋಧ ಕಾರ್ಯ ಮುಂದುವರೆದಿದೆ. ಜಿಲ್ಲಾಡಳಿತದಿಂದ ಇದುವರೆಗೂ ಅಧಿಕೃತ ಅನುಮತಿ ಸಿಕ್ಕಿಲ್ಲ. ಈ ಹಿನ್ನೆಲೆ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಈಶ್ವರ್ ಮಲ್ಪೆ ಗಂಗಾವಳಿ ನದಿಗೆ ಇಳಿದಿದ್ದಾರೆ. ಸೇನಾ ತಂಡ ಈ ಹಿಂದೆ ಗುರುತಿಸಿದ ಜಾಗದಲ್ಲಿ ಮತ್ತೊಮ್ಮೆ ಮುಳುಗಿ ಈಶ್ವರ ಮಲ್ಪೆ ಶೋಧ ನಡೆಸಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಶಾಸಕ ಸತೀಶ್ ಸೈಲ್ ಖುದ್ದು ಸ್ಥಳಕ್ಕೆ ಆಗಮಿಸಿದ್ದರು. ಇವರೊಂದಿಗೆ ಕೇರಳ ರಾಜ್ಯದ ಶಾಸಕ ಆಶ್ರಫ್ ಕೂಡ ಹಾಜರಿದ್ದರು.
ಇನ್ನು ಶೋಧ ಕಾರ್ಯಾಚರಣೆ ವೇಳೆ ಲಾರಿಯ ಜಾಕ್ ಪತ್ತೆಯಾಗಿದೆ. ಕೇರಳ ಮೂಲದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಯ ಜಾಕ್ ಪತ್ತೆ ಮಾಡಲಾಗಿದೆ. ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ಕಾರ್ಯಾಚರಣೆ ವೇಳೆ ಜಾಕ್ ಪತ್ತೆಯಾಗಿದ್ದು, ಸಿಕ್ಕಿರುವ ಜಾಕ್ ಅರ್ಜುನ್ ಓಡಿಸುತ್ತಿದ್ದ ಲಾರಿಯದ್ದೇ ಎಂದು ಲಾರಿ ಮಾಲಿಕ ಮುಫಿನ್ ಖಚಿತ ಪಡಿಸಿದ್ದಾರೆ. ಲಾರಿಯ ಎರಡು ಬಿಡಿ ಭಾಗಗಳು ಕೂಡ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಒಂದು ಲಾರಿ ಬಾಗಿಲಿನ ಕೀಲು ಹಾಗೂ ಜಾಕ್ ಪತ್ತೆಯಾಗಿದೆ. ಬಾಗಿಲಿನ ಕೀಲು ತನ್ನ ವಾಹನದ್ದಲ್ಲ. ಆದರೆ ಜಾಕ್ ಮಾತ್ರ ತನ್ನ ವಾಹನದ್ದೇ ಎಂದು ನಾಪತ್ತೆಯಾದ ಬೆಂಜ್ ಲಾರಿಯ ಮಾಲಿಕ ಮುಫಿನ್ ಹೇಳಿದ್ದಾರೆ.
ಕಾರ್ಯಾಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರ್ ಮಲ್ಪೆ ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಾಚರಣೆ ಆರಂಭ ಮಾಡಿದೆವು. ನಿರಂತರ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಲಾಯಿತು. ನಾಳೆ ಮತ್ತೆ ಕಾರ್ಯಾಚರಣೆ ಆರಂಭ ಮಾಡುತ್ತೇವೆ. ಲಾರಿ ಇಂತಹದ್ದೇ ಸ್ಥಳದಲ್ಲಿ ಇದೆ ಎಂಬುವುದು ಖಚಿತ ಆಗಿದೆ. ಆದರೆ ಆ ಲಾರಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ. ಮಣ್ಣನ್ನು ತೆರವು ಮಾಡುವ ಕಾರ್ಯದ ಬಳಿಕ ಮೃತ ದೇಹಗಳು ಸಿಗುವ ಸಾಧ್ಯತೆಯಿದೆ ಎಂದು ತಿಳಿಸಿದರು.