ಕರಾವಳಿ

ಕಂಟೈನ‌ರ್ ಲಾರಿ ಮಗುಚಿ ಬಿದ್ದು ಅಪ್ಪಚ್ಚಿಯಾದ ಕಾರು

Views: 158

ಉಪ್ಪಿನಂಗಡಿ: ಕಂಟೈನರ್ ಲಾರಿಯೊಂದು ಕಾರಿನ ಮೇಲೆ ಮಗುಚಿ ಬಿದ್ದ ಪರಿಣಾಮ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದೆ. ಆದರೆ ಈ ಅಪಘಾತದ ವೇಳೆ ಕಾರಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ಘಟನೆ ನಡೆದಿದೆ.

ದಾವಣಗೆರೆಯ ನಿವಾಸಿಗರಾದ ಗಣೇಶ, ಶಿವು, ಕಾವ್ಯಾ, ದಂಡ್ಯಮ್ಮ ಅವರು ಚಾಲಕ ಅಬ್ದುಲ್ ರಹಿಮಾನ್ ಮುಲ್ಲಾ ಅವರೊಂದಿಗೆ ಶುಕ್ರವಾರ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ದರ್ಶನ ಪಡೆದಿದ್ದರು. ಬಳಿಕ ಶನಿವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದರ್ಶನ ಪಡೆದು ಊರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಕಾವ್ಯಾ ಎಂಬವರಿಗೆ ವಾಂತಿ ಬಂದಿತ್ತು. ತಕ್ಷಣವೇ ಕಾರನ್ನು ನಿಲ್ಲಿಸಿ ಕಾವ್ಯಾಗೆ ಉಪಚರಿಸಲು ಎಲ್ಲರೂ ಕಾರಿನಿಂದ ಕೆಳಗಡೆ ಇಳಿದಿದ್ದರು. ಈ ವೇಳೆಗೆ ಕಾರಿನ ಚಾಲಕನೂ ಕೆಳಗಿಳಿದು ಮೂತ್ರ ವಿಸರ್ಜನೆಗಾಗಿ ಅಲ್ಲಿಂದ ಕೆಲ ದೂರ ಹೋಗಿದ್ದರು. ಆಗ ಕಂಟೇನರ್ ಲಾರಿಯೊಂದು ಬಂದು ನೋಡ ನೋಡುತ್ತಿದ್ದಂತೆ ಕಾರಿನ ಮೇಲೆ ಮಗುಚಿ ಬಿದ್ದಿದೆ. ಇದರಿಂದಾಗಿ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದೆ. ಅದೃಷ್ಟವಶಾತ್ ಕಾರಿನಿಂದ ಎಲ್ಲರೂ ಇಳಿದಿದ್ದರಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

Related Articles

Back to top button