ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ 29 ತಾಲೂಕುಗಳಲ್ಲಿ ಭೂಕುಸಿತದ ಭೀತಿ..!

Views: 160
ಬೆಂಗಳೂರು : ಕರಾವಳಿ ಮತ್ತು ಮಲೆನಾಡು ಭಾಗದ 29 ತಾಲೂಕಿನ ಹಲವು ಕಡೆಗಳಲ್ಲಿ ಕೇರಳದ ವಯನಾಡಿನ ಮತ್ತು ಉತ್ತರ ಕನ್ನಡ ಶಿರೂರು ರೀತಿಯಲ್ಲೇ ಭೂಕುಸಿತ ಸಂಭವಿಸುವ ಅಪಾಯವಿದೆ!
ಮಳೆಗಾಲದ ಸಂದರ್ಭದಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಉಂಟಾಗುವ ಭೂಕುಸಿತಕ್ಕೆ ಕಾರಣ ಹಾಗೂ ಅದನ್ನು ತಡೆಯುವ ಸಲುವಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2022ರಲ್ಲಿ ಭೂಕುಸಿತ ನಿರ್ವಹಣೆಗಾಗಿ ಕ್ರಿಯಾಯೋಜನೆ ರೂಪಿಸಿತ್ತು. ಆದರೆ, ಆ ಕ್ರಿಯಾಯೋಜನೆಗೆ ತಕ್ಕಂತೆ ಸರ್ಕಾರ ಈವರೆಗೆ ಸಮರ್ಪಕ ಕ್ರಮ ಕೈಗೊಂಡಿಲ್ಲ. ಹೀಗಾಗಿ 2022ರಲ್ಲಿ ಭಾರೀ ಮಳೆಯಿಂದಾಗಿ ರಾಜ್ಯದ 55 ಕಡೆಗಳಲ್ಲಿ ಭೂಕುಸಿತ ಉಂಟಾಗಿತ್ತು. ಅಲ್ಲದೆ, 2023ರಲ್ಲಿ ಮಳೆ ಪ್ರಮಾಣ ಕುಸಿದ ಕಾರಣ ಕೇವಲ 2 ಕಡೆ ಮಾತ್ರ ಭೂಕುಸಿತವಾಗಿತ್ತು. ಆದರೆ, ಈ ಬಾರಿ ಮಳೆಯ ಪ್ರಮಾಣ ತೀವ್ರವಾಗಿರುವ ಕಾರಣದಿಂದಾಗಿ 16ಕ್ಕೂ ಹೆಚ್ಚಿನ ಕಡೆಗಳಲ್ಲಿ ಗುಡ್ಡ ಮತ್ತು ಭೂಕುಸಿತ ಉಂಟಾಗಿದೆ. ಅಲ್ಲದೆ, ಭೂಕುಸಿತ ನಿರ್ವಹಣೆಗಾಗಿ ರೂಪಿಸಲಾಗಿದ್ದ ರಾಜ್ಯ ಕ್ರಿಯಾ ಯೋಜನೆಯಲ್ಲಿರುವಂತೆ ಭೂಕುಸಿತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ 29 ತಾಲೂಕಿನ ಹಲವೆಡೆ ಭೂಕುಸಿತ ಪ್ರಮಾಣ ಹೆಚ್ಚುವ ಆತಂಕವಿದೆ.
ಭೂಕುಸಿತ ನಿರ್ವಹಣೆಗಾಗಿ ರಾಜ್ಯ ಕ್ರಿಯಾಯೋಜನೆಯಲ್ಲಿ 2022ರಲ್ಲಿ ಭೂಕುಸಿತಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಶಾಶ್ವತ ಪರಿಹಾರವನ್ನೂ ಸೂಚಿಸಲಾಗಿತ್ತು. ಅದರಂತೆ ಹೆಚ್ಚು ಮಳೆ ಬೀಳುವ, ಗುಡ್ಡ ಕುಸಿಯುವ ಸಂಭವನೀಯತೆ ಇರುವ ಸ್ಥಳಗಳನ್ನು ಗುರುತಿಸಬೇಕು. ಅಲ್ಲಿ ತಡೆಗೋಡೆ ನಿರ್ಮಾಣ, ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು, ಭೂಕುಸಿತದಂತಹ ಸಂದರ್ಭದಲ್ಲಿ ವಿವಿಧ ಇಲಾಖೆಗಳೊಂದಿಗೆ ತಕ್ಷಣದಲ್ಲಿ ಸಮನ್ವಯ ಸಾಧಿಸಲು ಸೂಕ್ತ ವ್ಯವಸ್ಥೆ ಮಾಡುವುದು, ಪ್ರತಿವರ್ಷ ಕ್ರಿಯಾಯೋಜನೆಯನ್ನು ಉನ್ನತೀಕರಿಸುವುದು, ಭೂಕುಸಿತ ಭೀತಿ ಇರುವಲ್ಲಿ ಭೂ ವೈಜ್ಞಾನಿಕ ಅಧ್ಯಯನ ನಡೆಸುವುದು ಹೀಗೆ ಇನ್ನಿತರ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಆದರೆ, ಆ ಅಂಶಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಭೂಕುಸಿತ ಘಟನೆಗಳು ನಿರಂತರವಾಗುವಂತಾಗಿದೆ.
ಭೂಕುಸಿತಕ್ಕೆ ಕಾರಣಗಳು?: ಕಡಿದಾದ ಗುಡ್ಡಗಳಲ್ಲಿ ತೆಳುವಾದ ಮಣ್ಣಿನ ಹೊದಿಕೆ, ಇಳಿಜಾರು ಪ್ರದೇಶದ ಭೂ ಸ್ವರೂಪದಲ್ಲಿ ಬದಲಾವಣೆ, ಭಾರೀ ಮಳೆ, ನೈಸರ್ಗಿಕವಾಗಿ ನೀರು ಹರಿಯುವಿಕೆಗೆ ತಡೆ, ಇಳಿಜಾರು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುವುದು, ನೈಸರ್ಗಿಕ ನಾಲಾಗಳಲ್ಲಿ ತಾತ್ಕಾಲಿಕ ಆಣೆಕಟ್ಟು ನಿರ್ಮಾಣ, ಗುಡ್ಡ ಸೇರಿದಂತೆ ಇಳಿಜಾರು ಪ್ರದೇಶದಲ್ಲಿ ಅರಣ್ಯ ನಾಶ ಮಾಡುವುದರಿಂದ ಭೂಕುಸಿತವಾಗುತ್ತದೆ.
ಭೂಕುಸಿತದ ಭೀತಿ ಇರುವ ಜಿಲ್ಲೆ, ತಾಲೂಕುಗಳು
ಉತ್ತರ ಕನ್ನಡ: ಅಂಕೋಲಾ, ಹೊನ್ನಾವರ, ಕಾರವಾರ, ಕುಮಟಾ, ಸಿದ್ದಾಪುರ, ಶಿರಸಿ, ಸೂಪಾ, ಯಲ್ಲಾಪುರ
ಉಡುಪಿ: ಹೆಬ್ರಿ, ಕಾರ್ಕಳ, ಬೈಂದೂರು, ಕುಂದಾಪುರ
ಶಿವಮೊಗ್ಗ: ತೀರ್ಥಹಳ್ಳಿ, ಸಾಗರ, ಹೊಸನಗರ
ಕೊಡಗು: ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ
ದಕ್ಷಿಣ ಕನ್ನಡ: ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಕಡಬ, ಸುಳ್ಯಾ, ಪುತ್ತೂರು
ಚಿಕ್ಕಮಗಳೂರು: ಚಿಕ್ಕಮಗಳೂರು, ಮೂಡಿಗೆರೆ, ಎನ್ಆರ್ ಪುರ, ಶೃಂಗೇರಿ
ಹಾಸನ: ಸಕಲೇಶಪುರ