ಮಣೂರು: ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಭೇಟಿ ಪ್ರಕರಣ ನಿಗೂಢ..! 3 ತಂಡಗಳಲ್ಲಿ ತನಿಖೆ ಚುರುಕು

Views: 189
ಕೋಟ: ಮಣೂರಿನ ಉದ್ಯಮಿ ನಿವಾಸಿಯೋರ್ವರ ಮನೆಗೆ ಜು. 25ರಂದು ಬೆಳಗ್ಗೆ ಎರಡು ಕಾರುಗಳಲ್ಲಿ ಪೊಲೀಸರು ಹಾಗೂ ಅಧಿಕಾರಿಗಳ ಸೋಗಿನಲ್ಲಿ ಐಟಿ ಸೋಗಿನಲ್ಲಿ ತಂಡವೊಂದು ಭೇಟಿ ನೀಡಿ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ ಪ್ರಕರಣ ನಿಗೂಢವಾಗಿದ್ದು,3 ತಂಡಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಘಟನೆ ನಡೆದು 5 ದಿನಗಳು ಕಳೆದರೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬೀಳದಿರುವುದರಿಂದ ತಂಡ ಯಾವ ಉದ್ದೇಶದಿಂದ ಈ ರೀತಿ ಮಾಡಿರಬಹುದು ಎನ್ನುವ ಕುತೂಹಲ ಮೂಡಿಸಿದೆ.
ಆ ದಿನ ಬೆಳಿಗ್ಗೆ 9 ಗಂಟೆ ಸುಮಾರಿಗೆ ಏಳು ನಿಮಿಷಗಳ ಕಾಲ ಉದ್ಯಮಿಯ ಮನೆಯಲ್ಲಿ ಇದ್ದಿದ್ದು, ನಂತರ ಅಲ್ಲಿಂದ ಎಸ್ಕೇಪ್ ಆದ ಖದೀಮರು ಟೋಲ್ ತಪ್ಪಿಸುವ ಸಲುವಾಗಿ ಸಾಸ್ತಾನ ಎಡಬೆಟ್ಟು ಮಾರ್ಗವಾಗಿ ಸಾಗಿದವರು. ಎಡಬೆಟ್ಟು -ಪಾಂಡೇಶ್ವರ ಸಮೀಪ ಇಕ್ಕಟ್ಟಾದ ರಸ್ತೆಯಲ್ಲಿ 9:15ರ ಸುಮಾರಿಗೆ ಇನೋವಾ ಕಾರು ರಸ್ತೆಯ ಬದಿಯ ಚರಂಡಿಗೆ ವಾಲಿದ್ದರಿಂದ ಊರವರ ಸಹಕಾರದೊಂದಿಗೆ ಕಾರನ್ನು ಮೇಲಕ್ಕೆ ಎತ್ತಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕುಮಾರ್ ನೇತೃತ್ವದಲ್ಲಿ ಕೋಟ ಪೊಲೀಸರು ಹಾಗೂ ಉನ್ನತ ಅಧಿಕಾರಿಗಳನ್ನೊಳಗೊಂಡು ಮೂರು ತಂಡಗಳನ್ನು ರಚಿಸಿದ್ದು ಮುಂಬಯಿ, ಶಿವಮೊಗ್ಗ, ಬೆಂಗಳೂರು ಮೊದಲಾದ ಕಡೆಗಳಲ್ಲಿ ತಂಡ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಮನೆಯ ಯಜಮಾನ ಬೇರೆ ಬೇರೆ ವ್ಯವಹಾರಗಳನ್ನು ನಡೆಸುತ್ತಿದ್ದು,ಈ ಹಿಂದೆ ಬೆಂಗಳೂರಿನಲ್ಲಿಯೂ ವ್ಯವಹಾರ ನಡೆಸಿಕೊಂಡು ಬಂದಿದ್ದ ಅವರು ಇದಕ್ಕೆ ಸಂಬಂಧಿಸಿದಂತೆ ಬೆದರಿಕೆಯೊಡ್ಡಲು ಅಥವಾ ಹಣವನ್ನು ದೋಚುವ ಸಲುವಾಗಿ ಈ ರೀತಿಯ ಸನ್ನಿವೇಶ ಸೃಷ್ಟಿಸಿರ ಬಹುದೇ ಎನ್ನುವ ಅನುಮಾನ ಮೂಡಿದೆ.
ಮತ್ತೊಂದು ಆಯಾಮದಲ್ಲಿ ದರೋಡೆಕೋರರು ಪೊಲೀಸರು, ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಬಂದು ಸಿನಿಮೀಯ ಮಾದರಿಯಲ್ಲಿ ಮನೆಯಲ್ಲಿರುವ ಚಿನ್ನ, ಹಣ ಮುಂತಾದ ಸಂಪತ್ತನ್ನು ಲೆಕ್ಕ ನೀಡುವಂತೆ ಹೇಳಿ ಅನಂತರ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸುವ ಸಂಚನ್ನು ತಂಡ ಹೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.