ಶಿರೂರು ಗುಡ್ಡ ಕುಸಿತ:ಕಾರ್ಯಾಚರಣೆ ಬಹುತೇಕ ಅಂತ್ಯ?

Views: 122
ಉತ್ತರ ಕನ್ನಡ: ಶಿರೂರು ಗುಡ್ಡ ಕುಸಿತ ದುರಂತದ ಮಣ್ಣು ತೆರವು ಕಾರ್ಯಾಚರಣೆಗೆ ಇಂದಿಗೆ 13 ದಿನಗಳಾಗಿವೆ. ಗುಡ್ಡ ಕುಸಿದಿರುವ ಸ್ಥಳದಲ್ಲಿ ನಾಪತ್ತೆಯಾಗಿದ್ದ ಅರ್ಜುನ್, ಜಗನ್ನಾಥ್ ನಾಯ್ಕ್, ಲೋಕೇಶ್ಗಾಗಿ ನೌಕಾಪಡೆ ಸೇರಿದಂತೆ ಮಿಲಿಟರಿ ಪಡೆಗಳು ತೀವ್ರ ಹುಡುಕಾಟ ನಡೆಸುತ್ತಲೇ ಇದ್ದಾರೆ. ಇಷ್ಟಾದ್ರೂ ಈ ಮೂವರು ಇನ್ನೂ ಪತ್ತೆಯಾಗಿಲ್ಲ. ಅಲ್ಲದೇ ಕಾರ್ಯಾಚರಣೆ ಕೂಡ ಬಹುತೇಕ ಅಂತ್ಯಕ್ಕೆ ಬಂದಿದೆ.
ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡ ಹುಡುಕಾಟ ನಡೆಸಿದರೂ ಲಾರಿ ಹಾಗೂ ಚಾಲಕ ಅರ್ಜುನ್ ದೇಹ ಪತ್ತೆಯಾಗಿಲ್ಲ. ದಿನದಿಂದ ದಿನಕ್ಕೆ ಗಂಗಾವಳಿ ನದಿ ನೀರಿನ ಮಟ್ಟ ಹೆಚ್ಚುತ್ತಿವೆ. ನದಿಯ ಒಳಗೆ ಮಣ್ಣು, ಕಲ್ಲು ಬಂಡೆ ಹಾಗೂ ಮರದ ದಿಮ್ಮಿಗಳು ಇವೆ. ಹೀಗಾಗಿ ಈ ಕಾರ್ಯಾಚರಣೆಯಲ್ಲಿ ಲಾರಿ ಮೇಲಕ್ಕೆ ಎತ್ತಲೂ ಜಿಲ್ಲಾಡಳಿತ ವಿಫಲಗೊಂಡಿದೆ. ಅದಕ್ಕಾಗಿ ಈ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ.
ಕಳೆದ ಜುಲೈ 16ರಂದು ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಗುಡ್ಡ ಕುಸಿತದ ಸ್ಥಳದಲ್ಲಿ 11 ಜನ ನಾಪತ್ತೆಯಾಗಿದ್ದರು. ಗುಡ್ಡ ಕುಸಿತದ ಸ್ಥಳದಲ್ಲಿ ರಸ್ತೆ ಬದಿಯಲ್ಲಿದ್ದ ಅಂಗಡಿ ಕೊಚ್ಚಿಹೋಗಿತ್ತು. ಒಂದೇ ಕುಟುಂಬದ ಐವರು ಇದರಿಂದಾಗಿ ಮೃತಪಟ್ಟಿದ್ದರು. ಇದಾದ ಬಳಿಕ 8 ಮಂದಿಯ ಮೃತದೇಹ ಪತ್ತೆಯಾಗಿತ್ತು. ಸದ್ಯ 3 ದೇಹಕ್ಕಾಗಿ ನೌಕಾಪಡೆ ಸೇರಿದಂತೆ ಮಿಲಿಟರಿ ಪಡೆಗಳು ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಅದೆಷ್ಟೇ ಹುಡುಕಾಟ ನಡೆಸಿದರೂ ಮೂವರು ಇನ್ನೂ ಪತ್ತೆಯಾಗಿಲ್ಲ.