ಮುಂದುವರಿದ ಮಳೆ, ಕರಾವಳಿಯಲ್ಲಿ ಮತ್ತೆ ಎರಡು ದಿನ ‘ರೆಡ್ ಅಲರ್ಟ್’ ಘೋಷಣೆ, ಶಾಲೆಗೆ ರಜೆ ಎಲ್ಲೆಲ್ಲಿ ?

Views: 226
ಮೈಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ಆರ್ಭಟ ಮುಂದುವರೆದಿದ್ದು, ಈ ಹಿನ್ನೆಲೆ ಮತ್ತೆ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳಿಗೆ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು, ಉತ್ತರ ಒಳನಾಡಿನ ಬೆಳಗಾವಿ, ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗವು ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಸಹ ಅತ್ಯಂತ ಭಾರೀ ಮಳೆಯಾಗಲಿದೆ. ಮತ್ತು ಅಲ್ಲಿನ ಜಿಲ್ಲೆಗಳಲ್ಲಿ ನಿರಂತರ ಗಾಳಿಯ ವೇಗ 40 ರಿಂದ 50 ಕಿ.ಮೀ ತಲುಪುವ ಸಾಧ್ಯತೆಯಿದೆ. ಒಳನಾಡಿನ ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿ ಸಹ ಭಾರೀ ಗಾಳಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಮತ್ತು ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಗಾಳಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಶಾಲೆಗೆ ರಜೆ ಘೋಷಣೆ ಎಲ್ಲೆಲ್ಲಿ?
ಉತ್ತರ ಕನ್ನಡದಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ಜಿಲ್ಲೆಯ ಹತ್ತು ತಾಲೂಕಿನ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹಾಗೆ ದಕ್ಷಿಣ ಕನ್ನಡದಲ್ಲೂ ರೆಡ್ ಅಲರ್ಟ್ ಇರುವ ಕಾರಣ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ಸೇರಿ 5 ತಾಲೂಕಿನ ವಿದ್ಯಾರ್ಥಿಗಳಿಗೆ ರಜೆಯನ್ನ ಸೂಚಿಸಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಸೇರಿ 5 ತಾಲೂಕಿನ ಶಿಕ್ಷಣ ಸಂಸ್ಥೆಗೆ ರಜೆ ಆದೇಶ ಹೊರಡಿಸಲಾಗಿದೆ. ಕೊಡಗಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನ ಹೊರತು ಪಡಿಸಿ, ಮಿಕ್ಕ ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಡಿಡಿಪಿಐ ಆದೇಶಿಸಿದ್ದಾರೆ.
ಭಾರೀ ಮಳೆ ಹಿನ್ನೆಲೆ ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.18ರ ಗುರುವಾರ ತಾಲೂಕಿನ ಆಯಾ ತಹಶೀಲ್ದಾರುಗಳು ಹಾಗೂ ಬಿಇಓ ರಜೆ ಘೋಷಣೆ ಮಾಡಿದ್ದಾರೆ.