ಕರಾವಳಿ

ಪುಂಗಿಯೇ ಶ್ರುತಿ ಪೆಟ್ಟಿಗೆ 

ಬಾಲ್ಯದಲ್ಲಿ ಯಕ್ಷಗಾನದ ಗೀಳು – ಭಾಗ 2

Views: 6

ಆಗಿನ ಕಾಲದಲ್ಲಿ ನಮ್ಮ ಮನೆಯಲ್ಲಿ ಒಂದು ಪುಂಗಿ ಇತ್ತು. ನಾವು ಅಂದರೆ ಮಕ್ಕಳು ಆ ಪುಂಗಿಯನ್ನು ಊದಿ ಸಂತೋಷ ಪಡುತ್ತಿದ್ದೆವು. ಆ ಪುಂಗಿಯ ಉಪಯೋಗ ಏನು, ಅದು ಅಲ್ಲಿಗೆ ಹೇಗೆ ಬಂತು ಎನ್ನುವುದು ನಮಗೆ ತಿಳಿದಿರಲಿಲ್ಲ. ಅದನ್ನು ತಿಳಿದುಕೊಳ್ಳುವ ಆಸಕ್ತಿಯೂ ನಮಗೆ ಇರಲಿಲ್ಲ. ಅದು ನಮಗೊಂದು ಆಟದ ಸಾಮಗ್ರಿ ಆಗಿತ್ತು, ಅಷ್ಟೆ.

 

ಒಂದು ದಿನ ಸಂಜೆಯ ಹೊತ್ತು ನಮ್ಮ ತಂದೆಯವರ ಹಳೆಯ ಸ್ನೇಹಿತರಾಗಿದ್ದ ಶ್ರೀ ಶೇನಾಡಿ ಸದಾಶಿವ ನಾಯ್ಕರು (ಸದಿಯ ನಾಯ್ಕರು) ನಮ್ಮ ಮನೆಗೆ ಬಂದರು. ಉದ್ಯೋಗನಿಮಿತ್ತ ಘಟ್ಟದ ಮೇಲೆ ಹೋಗಿದ್ದವರು ಆಗ ಊರಿಗೆ ಬಂದಿದ್ದರು. ಅಂದು ಸೂರ್ಯಾಸ್ತಮಾನ ಆಗುತ್ತಿದ್ದಂತೆ ನಮ್ಮ ತಂದೆ, ಚಿಕ್ಕಪ್ಪ ಮತ್ತು ಸದಿಯ ನಾಯ್ಕರು ಯಕ್ಷಗಾನ ಕಾರ್ಯಕ್ರಮ ನಡೆಸಿದರು. ನಮ್ಮ ತಂದೆಯವರ (ಉಳ್ಳೂರು ಬಚ್ಚ ಶೆಟ್ಟಿಗಾರ್) ಭಾಗವತಿಕೆ. ಚಿಕ್ಕಪ್ಪ (ಶೀನ ಶೆಟ್ಟಿಗಾರ್) ಪುಂಗಿ ಓದಿದರು. ಅದೇ ಭಾಗವತರಿಗೆ ಶ್ರುತಿಯಾಯಿತು. ಸದಿಯ ನಾಯ್ಕರು ಮತ್ತು ಚಿಕ್ಕಪ್ಪ ಅರ್ಥಧಾರಿಗಳಾದರು. ಮನೆಯ ಹೆಂಗಸರು ಮತ್ತು ಮಕ್ಕಳು ಪ್ರೇಕ್ಷಕರಾದರು. ಸದಿಯ ನಾಯ್ಕರು ಊರಿನಲ್ಲಿ ಇರುವಷ್ಟು ದಿನ ಪ್ರತೀದಿನ ಸಂಜೆ ನಮ್ಮ ಮನೆಯಲ್ಲಿ ಈ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿತ್ತು. ಕೆಲವು ದಿನಗಳ ಮಟ್ಟಿಗೆ ಒಂದು ಮದ್ದಳೆಯನ್ನೂ ತರಲಾಗಿತ್ತು. ಪ್ರತಿದಿನವೂ ಯಕ್ಷಗಾನ ಮುಗಿದ ಮೇಲೆ ಸದಿಯ ನಾಯ್ಕರು ತಮ್ಮ ಮನೆಗೆ ಹೋಗುತ್ತಿದ್ದರು. ಆ ಮೇಲೆ ನಾವು ಊಟ ಮಾಡಿ ಮಲಗುತ್ತಿದ್ದೆವು.

ಇತ್ತೀಚಿಗೆ ಹಿರಿಯ ಯಕ್ಷಗಾನ ವಿದ್ವಾಂಸರೊಬ್ಬರ ಲೇಖನವೊಂದನ್ನು ನಾನು ಓದಿದೆ. ಅದರಲ್ಲಿ ಅವರು ಹಿಂದಿನ ಕಾಲದಲ್ಲಿ ಹಾರ್ಮೋನಿಯಂ, ಶ್ರುತಿ ಪೆಟ್ಟಿಗೆಗಳು ಉಪಯೋಗದಲ್ಲಿ ಇರಲಿಲ್ಲ. ಪುಂಗಿಯನ್ನೇ ಶ್ರುತಿ ಪೆಟ್ಟಿಗೆಯಾಗಿ ಹಿಂದಿನವರು ಬಳಸುತ್ತಿದ್ದರು ಎಂದು ಬರೆದಿದ್ದರು. ಆಗ ನನಗೆ ಮೇಲೆ ಉದ್ಧರಿಸಿದ ಘಟನೆ ನೆನಪಾಯಿತು. ಅವರು ಬರೆದ ಅಭಿಪ್ರಾಯವನ್ನು ಆ ಘಟನೆ ಪುಷ್ಟೀಕರಿಸಿತು. ಯಕ್ಷಗಾನ ಬಯಲಾಟಗಳಲ್ಲಿ ಪುಂಗಿಯ ಉಪಯೋಗವನ್ನು ನಾನು ಪ್ರತ್ಯಕ್ಷ ನೋಡಿದವನಲ್ಲ. ನಮ್ಮ ಮನೆಯಲ್ಲಿ ಅದೇ ಉದ್ದೇಶಕ್ಕೆ ಪುಂಗಿ ಇದ್ದಿರಬಹುದೆಂದು ನಾನು ಅಂದುಕೊಂಡೆ.

ಪ್ರತೀವರ್ಷ ಮಹಾಲಯ ಅಮಾವಾಸ್ಯೆಯಂದು ನಮ್ಮೂರ ತೋಟದಮಕ್ಕಿ ನಾರಾಯಣ ಸೇರಿಗಾರರ ಮನೆಯಲ್ಲಿ ತಾಳಮದ್ದಳೆ ನಡೆಯುತ್ತಿತ್ತು. ರಾತ್ರಿ ಊಟ ಮತ್ತು ಬೆಳಿಗ್ಗೆ ಇಡ್ಲಿ, ಚಾ ವ್ಯವಸ್ಥೆಯೂ ಇರುತ್ತಿತ್ತು. ನವರಾತ್ರಿ ಕಾಲದಲ್ಲಿ ಮಹಾನವಮಿಯಂದು ರಾತ್ರಿ ನಮ್ಮ ಮನೆಯಲ್ಲೂ ತಾಳಮದ್ದಳೆ ನಡೆಯುತ್ತಿತ್ತು. ನಮ್ಮೂರ ಪರಿಸರದಲ್ಲಿ ನಡೆಯುವ ತಾಳಮದ್ದಳೆಗಳಿಗೆ ನಮ್ಮ ತಂದೆಯವರೇ ಭಾಗವತಿಕೆ ಮಾಡುತ್ತಿದ್ದರು. ಮದ್ದಳೆಗೆ ಅಂತಯ್ಯ ಸೆಟ್ಟರು. ಚಂಡೆ ವಾದನಕ್ಕೆ ಹಿಮ್ಮೇಳದಲ್ಲಿ ಪರಿಣಿತರಾಗಿದ್ದ ಬಸ್ರೂರು ಗೋಪಾಲ ಆಚಾರ್ಯರು. ಅರ್ಥಧಾರಿಗಳಾಗಿ ಆಗಿನ ಹೆಸರಾಂತ ಕಲಾವಿದರಾದ ಶ್ರೀ ಕಂದಾವರ ರಘುರಾಮ ಶೆಟ್ಟರು, ಕರುಣಾಕರ ಶೆಟ್ಟರು, ಶಂಕರ ಶೆಟ್ಟರು, ಸರ್ವೋತ್ತಮ ಶೇಟ್, ಕೊರಗಪ್ಪನವರು ಮೊದಲಾಗಿ ಅನೇಕರು ಭಾಗವಹಿಸುತ್ತಿದ್ದರು. (ಕೆಲವರ ಹೆಸರನ್ನು ಮರೆತಿದ್ದಕ್ಕಾಗಿ ಕ್ಷಮೆಯಿರಲಿ.) ನಮ್ಮೂರಿನಲ್ಲಿ ಮತ್ತು ಹತ್ತಿರದಲ್ಲಿ ಎಲ್ಲೇ ತಾಳಮದ್ದಳೆ ನಡೆದರೂ ನಾವದನ್ನು ತಪ್ಪಿಸುತ್ತಿರಲಿಲ್ಲ. ಆಗಾಗ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದುದೂ ಇತ್ತು. ಯಕ್ಷಗಾನ ಬಯಲಾಟವೇ ಆಗಲಿ, ತಾಳಮದ್ದಳೆಯೇ ಆಗಲಿ, ಇಡೀ ರಾತ್ರಿ ನಿದ್ದೆಗೆಟ್ಟರೂ, ಮರುದಿನ ಶಾಲೆಗೆ ಹೋಗುವುದನ್ನು ಮಾತ್ರ ನಾವು ಎಂದೂ ತಪ್ಪಿಸುತ್ತಿರಲಿಲ್ಲ. ಅಂದ ಹಾಗೆ ನಾವು ತಾಳಮದ್ದಳೆ, ಬಯಲಾಟಗಳನ್ನು ನೋಡುವ ಕಾಲದಲ್ಲಿ ಹಾರ್ಮೋನಿಯಂ ಪೆಟ್ಟಿಗೆಗಳನ್ನೇ ಉಪಯೋಗ ಮಾಡುತ್ತಿದ್ದರು; ಪುಂಗಿ ಅಲ್ಲ.

ನಾರಾಯಣ ಶೆಟ್ಟಿಗಾರ್, ಬೆಂಗಳೂರು

ಮೊ. 9845660131

Related Articles

Back to top button
error: Content is protected !!