ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

Views: 170
ಉಡುಪಿ ಜಿಲ್ಲೆಯು ಕುಂದಾಪುರ, ಬೈಂದೂರು,ಕೋಟ, ಬ್ರಹ್ಮಾವರ ಮತ್ತು ವಿವಿಧ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ವ್ಯಾಪಕ ಹಾನಿ ಸಂಭವಿಸಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಪಶ್ಚಿಮಘಟ್ಟ ತಪ್ಪಲಿನಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕುಂದಾಪುರದಲ್ಲಿ ಹರಿಯುತ್ತಿರುವ ಪಂಚ ನದಿಗಳಾದ ಸೌಪರ್ಣಿಕಾ, ವಾರಾಹಿ, ಚಕ್ರ, ಕುಬ್ಜ, ಖೇಟ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಜನತೆ ನೆರೆ ಸಂಕಷ್ಟ ಅನುಭವಿಸಿದ್ದಾರೆ.
ಬೈಂದೂರು, ಬ್ರಹ್ಮಾವರ,ಕೋಟ, ಕುಂದಾಪುರ ಭಾಗದ ತಗ್ಗು ಪ್ರದೇಶಗಳ ಹಲವಾರು ಮನೆ, ಕೃಷಿ ಭೂಮಿ, ಅಡಿಕೆ,ತೆಂಗು ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ.
ಗ್ರಾಮೀಣ ಭಾಗದಲ್ಲಿ ಹಲವೆಡೆ ಸಂಪರ್ಕ ರಸ್ತೆಗಳ ಮೇಲೆ ನೀರು ಹರಿದು ಹೋಗಿ ರಸ್ತೆಗಳು ಸ್ಥಗಿತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.
ಕೋಟ ಹೋಬಳಿಯ ವಿವಿಧ ಕಡೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಸುರಿದ ಭಾರೀ ಮಳೆಗೆ ವ್ಯಾಪಕ ಮಳೆ ಹಾನಿ ಸಂಭವಿಸಿದೆ.
ಸೀತಾನದಿ ತುಂಬಿ ಹರಿದ ಪರಿಣಾಮ ಕೆಲಕಾಲ ಆಗುಂಬೆ-ಸೋಮೇಶ್ವರ ಹೆದ್ದಾರಿ ಸಂಪರ್ಕ ಕಡಿತಗೊಂಡು ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕಾವಡಿಯ ಸಂಕಾಡಿ ರತ್ನಾ ರಾಜೀವ ಮರಕಾಲ ಅವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಸಂಪೂರ್ಣ ಹಾನಿಗೊಳಗಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ 2 ತಾಲೂಕಿನ ವಿಪತ್ತು ನಿರ್ವಹಣಾ ಬೇಳೂರು ಘಟಕದ ಆರು ಜನ ಸ್ವಯಂ ಸೇವಕ ರು ಬೆಳಗಿನ ಜಾವ ಎರಡು ಗಂಟೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆಯ ತನಕ ಅಗ್ನಿ ಶಾಮಕದಳದವರೊಂದಿಗೆ ಬೇಳೂರು ಗ್ರಾಮದ ನೂಜಿ,ಬೇಳೂರು ದೇಲಟ್ಟು ,ಮತ್ತು ಹೊನ್ನಾರಿ ಎಂಬಲ್ಲಿ ನೆರೆಪೀಡಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.