ಇಂದು ಆರೂಡ್ ಹಬ್ಬ

Views: 67
ಮೇಷ ಸಂಕ್ರಮಣದ ಮರುದಿನದಿಂದ ಹೊಸ ವರ್ಷ ಆರಂಭವಾಗುತ್ತದೆ. ಅಂದು ಸೌರಯುಗಾದಿ ಆಚರಿಸಲಾಗುತ್ತದೆ (ಹಗ್ಗಿನ ತಿಂಗಳ ಪ್ರಾರಂಭ). ಕರಾವಳಿ ಕಡೆಯಲ್ಲಿ ಹೆಚ್ಚಾಗಿ ಸೌರಯುಗಾದಿ ಆಚರಿಸಲಾಗುತ್ತದೆ. ಇದು ಕೃಷಿಕರಿಗೆ ಸಂಬಂಧಪಟ್ಟ ಹಬ್ಬ. ಇದನ್ನು ಆರೂಡ್ ಹಬ್ಬ ಎಂದೇ ಕರೆಯಲಾಗುತ್ತದೆ. ಆರೂಡ್ ಹಬ್ಬ ಕೃಷಿ ಕೆಲಸಗಳು ಪ್ರಾರಂಭಗೊಳ್ಳುವ ಹೊಸ ವರ್ಷದ ಮೊದಲ ದಿನದ ಹಬ್ಬ.

ಹಿಂದಿನ ಕಾಲದಲ್ಲಿ ರೈತ ತಾನು ಬೇಸಾಯ ಮಾಡುವ ಗದ್ದೆಗಳಿಗೆ ಅಂದು ಹೊಟ್ಟು, ಗೊಬ್ಬರಗಳನ್ನು ಹಾಕುವ ಸಂಪ್ರದಾಯ ಇತ್ತು. ಸಾಂಕೇತಿಕವಾಗಿ ಗದ್ದೆಗೆ ಏಳು ಅಥವಾ ಒಂಬತ್ತು ಗುಪ್ಪೆ ಹೊಟ್ಟು ಮತ್ತು ಬೈಹುಲ್ಲಿನ ಗುಡ್ಡೆಗಳನ್ನು ಹಾಕಲಾಗುತ್ತಿತ್ತು. ಸೂರ್ಯೋದಯದ ಮೊದಲೇ ಎದ್ದು, ಹಿಂದಿನ ಸಂಜೆ ತಯಾರು ಮಾಡಿ ಇಟ್ಟಿದ್ದ ಹುಲ್ಲು ಸೂಡಿಗೆ ಬೆಂಕಿ ಹಚ್ಚಿ, ಅದರಿಂದ ಹೊಟ್ಟಿನ ಗುಪ್ಪೆಗಳಿಗೆ ಬೆಂಕಿ ಇಡಲಾಗುತ್ತಿತ್ತು. ಅದೇ ದಿನ ಹೋರಿ ಅಥವಾ ಎತ್ತುಗಳಿಗೆ ನೊಗ ನೇಗಿಲು ಕಟ್ಟಿ ಹೂಂಟಿ ಹೂಡಿ ಆರು ಸುತ್ತು ಹೂಡುವ ಸಂಪ್ರದಾಯ ಮಾಡುತ್ತಿದ್ದರು. ಇದು ಬೇಸಾಯಕ್ಕೆ ನಾಂದಿ ಹಾಡುವ ಸಂಪ್ರದಾಯ. ಈಗಲೂ ಹೋರಿ ಅಥವಾ ಎತ್ತುಗಳನ್ನು ಸಾಕಿರುವ ರೈತರು ಇದನ್ನು ಪಾಲನೆ ಮಾಡುತ್ತಿರಬಹುದು.

ಮಧ್ಯಾಹ್ನ ಹಬ್ಬದೂಟ. ಹಸಿ ಗೇರುಬೀಜ ಹಾಕಿ ಪಾಯಸ ಮಾಡುವುದು ಅಂದಿನ ವಿಶೇಷ. ಊರಿನ ದೇವಸ್ಥಾನದಲ್ಲಿ ಹೊಸ ವರ್ಷದ ಪಂಚಾಗ ಫಲ ಓದುವ ವಾಡಿಕೆಯೂ ಇತ್ತು. ಊರಿನ ಯುವಕರು ಮತ್ತು ಮಕ್ಕಳು ಸೇರಿ ಗೊಡ್ಡಾಟ ಆಡುತ್ತಿದ್ದರು. ದಪ್ಪ ಬಟ್ಟೆಯಲ್ಲಿ ಮರಳು ಕಟ್ಟಿ ಚೆಂಡು ತಯಾರಿಸಿ ಅದರಿಂದ ಆಟ ಆಡುತ್ತಿದ್ದರು. ಎಲ್ಲರೂ ಗುಂಪು ಸೇರಿ ಚೆಂಡನ್ನು ಆ ಗುಂಪಿನಲ್ಲಿ ಉಳಿದವರಿಗೆ ತಿಳಿಯದಂತೆ ಒಬ್ಬರ ಕೈಸೇರಿಸುತ್ತಿದ್ದರು. ಆ ಮೇಲೆ ಎಲ್ಲರೂ ದೂರ ದೂರ ಹೋಗಿ ನಿಲ್ಲುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ಕೈಯಲ್ಲೇ ಚೆಂಡು ಇದೆ ಎನ್ನುವಂತೆ ನಟನೆ ಮಾಡುತ್ತಿದ್ದರು. ನಿಜವಾಗಿ ಚೆಂಡು ಇರುವವನು ತನ್ನ ಹತ್ತಿರ ಸಿಕ್ಕಿದವರಿಗೆ ಆ ಚೆಂಡಿನಿಂದ ಹೊಡೆದು ಬಿಡುತ್ತಿದ್ದ. ಇದು ಚಿಕ್ಕಂದಿನಲ್ಲಿ ಆರೂಡ್ ಹಬ್ಬದ ದಿನ ನಾವು ಆಡುತ್ತಿದ್ದ ಗೊಡ್ಡಾಟ. ಈಗ ಆ ಸಂಭ್ರಮಗಳು ನೆನಪು ಮಾತ್ರ. ಏನಿದ್ದರೂ ಹಿಂದಿನವರು ಆಚರಿಸುತ್ತಿದ್ದ ಗೊಡ್ಡು (?) ಸಂಪ್ರದಾಯಗಳಿಗೆ ವಾಸ್ತವದಲ್ಲಿ ಉತ್ತಮ ಅರ್ಥ ಇತ್ತು ಎನ್ನುವುದು ಮಾತ್ರ ಸತ್ಯ.
ನಾರಾಯಣ ಶೆಟ್ಟಿಗಾರ್, ಬೆಂಗಳೂರು
ಮೊ. 9845660131






