ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಪಾರ್ಥಿವ ಶರೀರವನ್ನು ನಾಗೂರಿನಲ್ಲಿ ಅಂತಿಮ ವಿಧಿವಿಧಾನ ಪೂರೈಸಿ, ಅಂತ್ಯಸಂಸ್ಕಾರ

Views: 161
ಕುಂದಾಪುರ: ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳ ಪ್ರಯೋಗದ ಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ ಎಲ್ಲವೂ ಸಂಗೀತದ ಪ್ರಾಕಾರಗಳೇ ಎನ್ನುವ ಸೌಮ್ಯ ಸಮರ್ಥನೆ ಇತ್ತು. ಬಡಗುತಿಟ್ಟಿನ ಯಕ್ಷಲೋಕದಲ್ಲಿ ಕುಂಜಾಲು, ಉಪ್ಪೂರು ಎಂಬ ಶೈಲಿಯಲ್ಲಿ ಹಾಡುತ್ತಿದ್ದವರು ನಾವಡ ಹಾಗೂ ಧಾರೇಶ್ವರರು ಮಾತ್ರ ಎನ್ನುವ ಮಾತುಗಳು ಚಾಲ್ತಿಯಲ್ಲಿದ್ದವು. ಕಾಳಿಂಗ ನಾವಡರು ಮರೆಯಾದಾಗ ಬಡಗುತಿಟ್ಟು ರಂಗಕ್ಕೆ ಇಂಪಿನ ಕಂಠದ ಮೆರುಗು ನೀಡಿದವರು ಧಾರೇಶ್ವರ.
ಬೈಂದೂರು ಸಮೀಪದ ನಾಗೂರಿನಲ್ಲಿ ಮನೆ ಮಾಡಿಕೊಂಡಿದ್ದ ಅವರು, ಟ್ರಸ್ಟ್ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅನಾರೋಗ್ಯ, ಚಿಕಿತ್ಸೆ ಕಾರಣದಿಂದ ಬೆಂಗಳೂರಿನ ಪುತ್ರನ ಮನೆಯಲ್ಲಿ ಉಳಿದುಕೊಂಡಿದ್ದರು. ಗುರುವಾರ ಬೆಳಿಗ್ಗೆ ಧಾರೇಶ್ವರ ಅವರ ಅಸ್ತಂಗತ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತ ನೀಡಿದೆ. ಯಕ್ಷಲೋಕದ ಪ್ರಯೋಗಶೀಲ ಸಂಗೀತ ಮಾಂತ್ರಿಕನ ಸುದೀರ್ಘ ಒಡನಾಟದ ಕೊಂಡಿ ಶಾಶ್ವತವಾಗಿ ಕಳಚಿದೆ. ಧಾರೇಶ್ವರರು ಇನ್ನು ನೆನಪು ಮಾತ್ರ.
ಅಂತ್ಯಕ್ರಿಯೆ:ಗುರುವಾರ ಸಂಜೆ ಬೆಂಗಳೂರಿನಿಂದ ತರಲಾದ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ನಾಗೂರಿನ ಅವರ ಮನೆಯಲ್ಲಿ ಇರಿಸಲಾಗಿತ್ತು. ರಾತ್ರಿ ಗೋಕರ್ಣದಿಂದ ಬಂದಿದ್ದ ಕುಟುಂಬ ಪುರೋಹಿತರ ಮಾರ್ಗದರ್ಶನದಲ್ಲಿ ಪುತ್ರ ಕಾರ್ತಿಕ್ ಧಾರೇಶ್ವರ ಅಂತಿಮ ವಿಧಿವಿಧಾನ ಪೂರೈಸಿದ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು.
ಶಾಸಕ ಗುರುರಾಜ್ ಗಂಟಿಹೊಳೆ, ಯಕ್ಷಗಾನ ಅಕಾಡೆಮಿ ನಿಯೋಜಿತ ಅಧ್ಯಕ್ಷ ತಲ್ಲೂರು ಶಿವರಾಂ ಶೆಟ್ಟಿ, ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಡಗು ಹಾಗೂ ತೆಂಕುತಿಟ್ಟಿನ ಕಲಾವಿದರು ಸೇರಿದಂತೆ ನೂರಾರು ಮಂದಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.






