ಬಡಗುತಿಟ್ಟಿನ ಹೆಸರಾಂತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Views: 442
ಉಡುಪಿ: ಯಕ್ಷಗಾನದ ಬಡಗುತಿಟ್ಟಿನ ಹೆಸರಾಂತ ಭಾಗವತ ಕರಾವಳಿ ಕೋಗಿಲೆ ಬಿರುದಾಂಕಿತ ಸುಬ್ರಹ್ಮಣ್ಯ ಧಾರೇಶ್ವರ ( 67) ಬೆಂಗಳೂರಿನಲ್ಲಿ ಏ.25ರಂದು ಬೆಳಗ್ಗೆ ನಿಧನ ಹೊಂದಿದರು.
ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಅವರು ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ.
ಸುಮಾರು 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕೋಟ ‘ಅಮೃತೇಶ್ವರಿ ಮೇಳ’ ಶ್ರೀ ಪೆರ್ಡೂರು ಮೇಳದಲ್ಲಿ ಭಾಗವತರಾಗಿ, ಹೊಸ ರಾಗಗಳನ್ನು ಹೊಸ ತಾಂತ್ರಿಕತೆಯನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿದವರು.
ಕರ್ನಾಟಕ ರಾಜ್ಯೋತ್ಸವ ರಾಜ್ಯಮಟ್ಟದ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಬಿರುದು, ಸನ್ಮಾನಗಳಿಗೆ ಪಾತ್ರರಾಗಿರುವ ಧಾರೇಶ್ವರ ಅವರು ಸುಮಾರು ನಾಲ್ಕು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ ತೊಡಗಿಸಿಕೊಂಡಿದ್ದಾರೆ. ಗುರುಗಳಾದ ನಾರಾಯಣಪ್ಪ ಉಪ್ಪೂರರನ್ನು ಸದಾ ಸ್ಮರಿಸುತ್ತಿದ್ದ ಅವರು, ಸಾಧನೆಯ ಮೂಲಕ ಎತ್ತರಕ್ಕೇರಿದವರು. ಸಾಂಪ್ರದಾಯಿಕ ರಾಗ ಗಳೊಂದಿಗೆ ಹೊಸ ರಾಗಗಳನ್ನು ತಂದು ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಧಾರೇಶ್ವರರು, ಕಾಳಿಂಗ ನಾವಡರರ ನಂತರ ಯಕ್ಷಗಾನ ರಂಗದಲ್ಲಿ ತನ್ನ ಇಂಪಾದ ಕಂಠದಿಂದ ಜನಪ್ರಿಯರಾದವರು.
ಮೂಲತಃ ಎಲೆಕ್ಟ್ರಿಕಲ್ ಅಂಗಡಿ ಮಾಡಿಕೊಂಡಿದ್ದ ಸುಬ್ರಹ್ಮಣ್ಯ ಧಾರೇಶ್ವರ ಕೋಟದಲ್ಲಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಅಲ್ಲಿ ಭಾಗವತಿಕೆ ಕಲಿತರು. ಉಪ್ಪೂರರಿಂದ ಭಾಗವತಿಕೆಯ ಎಲ್ಲ ಪಟ್ಟುಗಳನ್ನು ಕಲಿತರು. ಆರಂಭದಲ್ಲಿ ಎಲೆಕ್ಟ್ರಿಶಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಈ ಸಂದರ್ಭ ಗುರುಗಳಾದ ಉಪ್ಪೂರರ ಒತ್ತಾಸೆಯಿಂದ ಭಾಗವತಿಕೆ ಮಾಡಲು ಆರಂಭಿಸಿದರು. ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ, ಎಲೆಕ್ಟ್ರಿಶಿಯನ್ ಆಗಿ, ಹಗಲು ಮೈಕ್ ಜಾಹೀರಾತು ನೀಡುವ ಕೆಲಸವನ್ನು ಮಾಡುತ್ತಿದ್ದ ಧಾರೇಶ್ವರರು, ಬಳಿಕ ಭಾಗವತಿಕೆಯಲ್ಲೇ ತೊಡಗಿಸಿಕೊಂಡು ಜನಪ್ರಿಯರಾದರು. ಪೆರ್ಡೂರು ಮೇಳದಲ್ಲಿ ಸುಮಾರು 26ಕ್ಕೂ ಅಧಿಕ ವರ್ಷಗಳ ತಿರುಗಾಟ ಸಹಿತ ಧಾರೇಶ್ವರ ಚಾರಿಟೇಬಲ್ ಟ್ರಸ್ಟ್ ಮೂಲಕ ಯಕ್ಷಗಾನ ಸೇವೆ ಮಾಡಿದ್ದಾರೆ.
ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆಯವರ ಹಾಡುಗಳೂ ಯಕ್ಷಗಾನದ ಹಾಡುಗಳಾಗಿದ್ದು ಧಾರೇಶ್ವರರ ಕಂಠದಲ್ಲಿ. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಸೂಪರ್ ಹಿಟ್ ಆಗಿವೆ.ಇತ್ತೀಚಿನ ನಾಗವಲ್ಲಿ ಪ್ರಸಂಗದಲ್ಲಿ ಉತ್ತಮ ರಾಗ ಸಂಯೋಜನೆಯೊಂದಿಗೆ ಮೇಳದಲ್ಲಿ ಅತಿ ಹೆಚ್ಚು ಗೇಟ್ ಕಲೆಕ್ಷನ್ ತಂದಿದೆ..






