ಕರಾವಳಿ

ಜೀ ಕನ್ನಡ ಡ್ರಾಮಾ ಜೂನಿಯರ್‌ ಸೀಸನ್‌ ಫೈನಲ್‌ಗೆ ಕರಾವಳಿಯ ಬಾಲ ಪ್ರತಿಭೆ ರಿಷಿಕಾ ಕುಂದೇಶ್ವರ

ಅಭಿನಯದಲ್ಲಿ ಆಂಗಿಕ, ಆಹಾರ್ಯ, ವಾಚಿಕ, ಸಾತ್ವಿಕತೆ ಈ ಎಲ್ಲಾ ವಿಭಾಗಗಳಲ್ಲಿಯೂ ಪರಿಪೂರ್ಣ ಕಲಾವಿದರೆನಿಸಿಕೊಂಡ ರಿಷಿಕಾ ತನ್ಮೂಲಕ ಪ್ರೇಕ್ಷಕರನ್ನು ಗಮನಸೆಳೆದಿದ್ದಾರೆ.ಪಾತ್ರಗಳಿಗೆ ಜೀವತುಂಬಿ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿದವರಲ್ಲ ಫೈನಲ್ ನಲ್ಲಿ ಪ್ರಶಸ್ತಿ ಗೆಲ್ಲುವ  ಆತ್ಮವಿಶ್ವಾಸದಲ್ಲಿದ್ದಾರೆ.

Views: 125

ಉಡುಪಿ: ಜೀ ಕನ್ನಡ ಡ್ರಾಮಾ ಜೂನಿಯರ್‌ ಸೀಸನ್‌ 5 ರಿಯಾಲಿಟಿ ಶೋದಲ್ಲಿ ಮಂಗಳೂರಿನ ರಿಷಿಕಾ ಕುಂದೇಶ್ವರ ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳೊಂದಿಗೆ ಫೈನಲ್‌ಗೆ ಲಗ್ಗೆ ಹಾಕಿದ್ದಾಳೆ.

ಅಭಿನಯದಲ್ಲಿ ಆಂಗಿಕ, ಆಹಾರ್ಯ, ವಾಚಿಕ, ಸಾತ್ವಿಕತೆ ಈ ಎಲ್ಲಾ ವಿಭಾಗಗಳಲ್ಲಿಯೂ ಪರಿಪೂರ್ಣ ಕಲಾವಿದರೆನಿಸಿಕೊಂಡ ರಿಷಿಕಾ ತನ್ಮೂಲಕ ಪ್ರೇಕ್ಷಕರನ್ನು ಗಮನಸೆಳೆದಿದ್ದಾರೆ.ಪಾತ್ರಗಳಿಗೆ ಜೀವತುಂಬಿ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿದವರಲ್ಲ ಫೈನಲ್ ನಲ್ಲಿ ಪ್ರಶಸ್ತಿ ಗೆಲ್ಲುವ  ಆತ್ಮವಿಶ್ವಾಸದಲ್ಲಿದ್ದಾರೆ.

ಡ್ರಾಮಾ ಜೂನಿಯರ್ಸ್‌ ಫೈನಲ್‌ ಜೀ ಕನ್ನಡ ವಾಹಿನಿಯಲ್ಲಿ ಏ.21ರಂದು ರಾತ್ರಿ 7 ಗಂಟೆಯಿಂದ 11 ಗಂಟೆ ವರೆಗೆ ನಡೆಯಲಿದೆ.

ಅಲ್ಲಮಪ್ರಭು ನಾಟಕದಲ್ಲಿ ಭಕ್ತಿ ಭಾವನಾತ್ಮಕ ವಚನಗಳನ್ನು ಹೇಳುತ್ತಾ ಭಕ್ತಿಯ ಪರಾಕಾಷ್ಠೆ ನೋಡಿ ಜಜಸ್‌ಗಳಾದ ರವಿಚಂದ್ರನ್‌, ಲಕ್ಷ್ಮೀ, ಮಾಳವಿಕಾ, ಪ್ರೇಮ್‌, ಅರುಣ್‌ ಸಾಗರ್‌, ರಾಜು ತಾಳಿಕೋಟೆ ಅವರು ಸ್ಟ್ಯಾಂಡಿಂಗ್‌ ಒವೇಶನ್‌ ನೀಡಿದ್ದು ಮಾತ್ರವಲ್ಲದೆ ಎಲ್ಲರೂ ವೇದಿಕೆಗೆ ಬಂದು ವಚನಗಳನ್ನು ಹಾಡಿ ಹೊಗಳಿದ್ದರು.

ದ.ರಾ. ಬೇಂದ್ರೆ ನಾಟಕದಲ್ಲಿ ಪುಟ್ಟ ಮಗುವಿನ ಸಾವಿನ ನೋವೇ ಹಾಡಾಗಿ ಹೊರಬರುವ ಹೃದಯ ಕಲಕುವ ಭಾವಾಭಿನಯ, ಏಸು ಕ್ರಿಸ್ತನ ಪಾತ್ರ, ಶ್ರೀಕೃಷ್ಣ ಪರಮಾತ್ಮ, ಶಿವನ ಉಗ್ರರೂಪ, ದಾಕ್ಷಾಯಿಣಿಯ ಆತ್ಮಾಹುತಿ, ಶಿವಸತಿ ಪಾರ್ವತಿಯ ಪ್ರೇಮ ನಿವೇದನೆ, ಪೌಂಡ್ರಕ, ಪರಶುರಾಮನ ಉಗ್ರರೂಪ, ಭಕ್ತ ಆಂಜನೇಯನ ಭಕ್ತಿ ಪರವಶತೆಯ ಅಭಿನಯವು ತೀರ್ಪುಗಾರರು ಮತ್ತು ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.

ಜಲಿಯನ್‌ ವಾಲಾಭಾಗ್‌ನಲ್ಲಿ ದೇಶ ಭಕ್ತರನ್ನು ಕೊಂದ ಕ್ರೂರಿ ಜನರಲ್‌ ಡಯರ್‌, ಹೊಯ್ಸಳ ವಂಶ ಸ್ಥಾಪಕ ಸಳದ ಕೆಚ್ಚು, ದೇಶಭಕ್ತ ಹುತಾತ್ಮ ಕ್ಯಾ. ಪ್ರಾಂಜಲ್, ದಾಸ ಶ್ರೇಷ್ಠ ಪುರಂದರ ದಾಸ, ಯಕ್ಷಪ್ರಶ್ನೆಗೆ ಉತ್ತರಿಸುವ ಧರ್ಮರಾಯ ಪಾತ್ರಗಳು ನೆನಪಲ್ಲಿ ಉಳಿಯುವಂತೆ ಮಾಡಿದೆ.

ಯಕ್ಷಗಾನ ಮತ್ತು ಶಾಸ್ತ್ರೀಯ ಸಂಗೀತ ವಿದ್ಯಾರ್ಥಿ ರಿಷಿಕಾ, ಕಂಚಿನ ಕಂಠದ ಮೂಲಕ ಶೋ ಉದ್ದಕ್ಕೂ ಹರಿಕಥೆ, ಸಾಂಪ್ರದಾಯಿಕ ಯಕ್ಷಗಾನದ ಭೀಮ, ಹಗಲುವೇಷದ ರಾಮ, ದೊಡ್ಡಾಟದ ಜಮದಗ್ನಿ ಹೀಗೆ ಜನಪದ, ಶಾಸ್ತ್ರೀಯ ವಿಭಾಗದಲ್ಲಿ ಸೈ ಎನಿಸಿಕೊಂಡಿದ್ದಳು. ಬಾಲ್ಡಿ ಇನ್‌ಸ್ಪೆಕ್ಟರ್‌, ಝೂ ಸ್ಕಿಟ್ ನಲ್ಲಿ ಲೇಡಿ ಆಫೀಸರ್‌, ಬೆಗ್ಗರ್‌ ಪೇರೆಂಂಟ್ಸ್‌ ಭಿಕ್ಷುಕಿ ಪಾತ್ರ, ಸ್ವಯಂವರ ಕಾಮಿಡಿ ಡ್ರಾಮಗಳಲ್ಲಿ ನಗೆಯ ಹೊನಲು ಹರಿಸಿ, ಜನಮನ ಮೆಚ್ಚುಗೆ ಪಡೆದಿದ್ದಳು.

ಈಕೆಯ ತಂದೆ ಜಿತೇಂದ್ರ ಕುಂದೇಶ್ವರ ಪತ್ರಕರ್ತರು ಮತ್ತು ಕಲಾವಿದರು. ತಂದೆಯೊಂದಿಗೆ ಯಕ್ಷಗಾನ, ಯಕ್ಷರೂಪಕ, ನಾಟಕಗಳಲ್ಲಿ ಅಭಿನಯಿಸುವ ರಿಷಿಕಾ, ಕೃಷ್ಣರಾಜ ನಂದಳಿಕೆ ಅವರಿಂದ ಕರ್ನಾಟಿಕ್‌ ಸಂಗೀತ ಕಲಿಯುತ್ತಿದ್ದಾರೆ. ಎಲ್ಲೂರು ರಾಮಚಂದ್ರ ಭಟ್‌ ಅವರಲ್ಲಿ ತೆಂಕುತಿಟ್ಟು ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾಳೆ. ಮಂಗಳೂರಿನ ಕದ್ರಿಯ ಜಿತೇಂದ್ರ ಕುಂದೇಶ್ವರ- ಸಂಧ್ಯಾ ದಂಪತಿ ಪುತ್ರಿ. ಮೂಲತಃ ಕಾರ್ಕಳ ಕುಂದೇಶ್ವರದ ರಿಷಿಕಾ, ಅಶೋಕ ನಗರ ಎಸ್‌ಡಿಎಂ ಸ್ಕೂಲ್‌ ವಿದ್ಯಾರ್ಥಿನಿ. ಬಾಲಯಕ್ಷಕೂಟ, ಯಕ್ಷಮಾಧ್ಯಮ ತಂಡದ ಸದಸ್ಯೆ. “ಹಾಡು ನೀ ಹಾಡು” ಗಾಯನ ರಿಯಾಲಿಟಿ ಶೋದಲ್ಲಿ ಸೆಕೆಂಡ್‌ ರನ್ನರಪ್‌ ಪ್ರಶಸ್ತಿ ಗೆದ್ದಿರುವ ರಿಷಿಕಾ, ವಿಶ್ವಕನ್ನಡಿಗ ಮಕ್ಕಳಿಗೆ ನಡೆದ ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪ್ರತಿಭಾ ಕಾರಂಜಿಯ ಭಗವದ್ಗೀತೆ ಕಂಠಪಾಠ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು.

 

Related Articles

Back to top button