ಅಪ್ಪ-ಮಗಳ ಪಾತ್ರದಲ್ಲಿ ದುನಿಯಾ ವಿಜಯ್, ಮಗಳು ರಿತನ್ಯ

Views: 32
ಜಂಟಲ್ ಮ್ಯಾನ್, ಗುರುಶಿಷ್ಯರು ಚಿತ್ರಗಳ ನಿರ್ದೇಶಕ ಹಾಗೂ ಕಾಟೇರ ಚಿತ್ರದ ಲೇಖಕ ಜಡೇಶ ಕೆ. ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್ ನಾಯಕರಾಗಿ ನಟಿಸುತ್ತಿರುವ 29ನೇ ಚಿತ್ರ ವಿ ಕೆ 29 ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಮಹಾಲಕ್ಷ್ಮೀಪುರದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಆರಂಭವಾಯಿತು.
ಶಾಸಕ ಗೋಪಲಯ್ಯ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು. ನಿರ್ದೇಶಕ ತರುಣ್ ಆಕ್ಷನ್ ಕಟ್ ಹೇಳಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ(ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಜಡೇಶ ಕೆ. ಹಂಪಿ, ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದಲ್ಲಿ ನಡೆಯುವ ಕಥೆಯಾಗುವುದರಿಂದ ಸಂಭಾಷಣೆ ಕೋಲಾರದ ಭಾಷೆಯಲ್ಲೇ ಇರುತ್ತದೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ.
ಅವರು ಕೋಲಾರದವರೆ ಆಗಿರುವುದು ವಿಶೇಷ.ಇದು 90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶಿವರಾಮ ಕಾರಂತರ ಚೋಮನ ದುಡಿಯ ಚೋಮನ ಪಾತ್ರ ಈ ಚಿತ್ರಕ್ಕೆ ಸ್ಪೂರ್ತಿ. ಹಾಗಂತ ಚೋಮನ ದುಡಿ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಹಾಕಲಾಗುತ್ತಿದೆ. ಉಳಿದಂತೆ ಕೋಲಾರ, ಮೈಸೂರಿನಲ್ಲೂ ಚಿತ್ರೀಕರಣ ನಡೆಯಲಿದೆ. ನಾಯಕ ವಿಜಯ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.






