ಕರಾವಳಿಯಲ್ಲಿ ಮಳೆ ಸಾಧ್ಯತೆ, ಎ.13,14 ಎಲ್ಲೋ ಅಲರ್ಟ್ ಘೋಷಣೆ

Views: 52
ಭಾರತೀಯ ಹವಾಮಾನ ಇಲಾಖೆಯು ಎ.13, 14ರಂದು ಕರಾವಳಿಯಲ್ಲಿ “ಎಲ್ಲೋ ಅಲರ್ಟ್’ ಘೋಷಿಸಿದೆ.
ಅಧಿಕ ತಾಪಮಾನದಿಂದ ಕಂಗಾಲಾಗಿದ್ದ ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ.
ಪಶ್ಚಿಮ ಘಟ್ಟದ ತಪ್ಪಲಿನ ಮಡಾಮಕ್ಕಿ, ಅರ್ಡಿ ಪ್ರದೇಶದಲ್ಲಿ ಶುಕ್ರವಾರ ಸಂಜೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಗಾಳಿ ಸಹಿತ ಉತ್ತಮ ಮಳೆ ಸುರಿದಿದೆ. ಉಳಿದಂತೆ ಕರಾವಳಿ ಭಾಗದ ಕೆಲವೆಡೆ ಹನಿ ಮಳೆಯಾಗಿದೆ.ಕಳೆದ ಎರಡು ವಾರಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ಜನರು ಹಾಗೂ ಕೃಷಿಕ ವರ್ಗ ಕೊಂಚ ನೆಮ್ಮದಿ ಅನುಭವಿಸಿದ್ದಾರೆ.
ಮಡಿಕೇರಿ ನಗರದ ಕೆಲವು ಭಾಗ, ನಾಪೋಕ್ಲು, ಬೇತು, ಚೆರಿಯಪರಂಬು, ಕೊಳಕೇರಿ ಎಮ್ಮೆಮಾಡು, ನೆಲಜಿ ಬಲ್ಲಮಾವಟಿ, ಪಾರಾಣೆ, ಕೈಕಾಡು ಹೊದ್ದೂರು, ಮೂರ್ನಾಡು, ಮೇಕೇರಿ, ಬಿಳಿಗೇರಿ ಮೊದಲಾದೆಡೆ ಮಳೆಯಾಗಿದ್ದು, ಜನರಲ್ಲಿ ಸಂತಸ ಮೂಡಿದೆ.
ಕಡಬ, ಗುಂಡ್ಯ ಸುತ್ತಮುತ್ತ ಸಂಜೆ ವೇಳೆ ಹನಿ ಮಳೆಯಾಗಿದೆ. ಸುಬ್ರಹ್ಮಣ್ಯ ಹಾಗೂ ಸುಳ್ಯ ಪರಿಸರದಲ್ಲಿ ಮೋಡ ಕವಿದ ವಾತಾವರಣವಿದೆ. ಉಡುಪಿ, ಮಣಿಪಾಲ ಪರಿಸರದಲ್ಲಿ ಹನಿಮಳೆಯಾಗಿದೆ. ಮಡಾಮಕ್ಕಿ, ಮಾಂಡಿ ಮೂರುಕೈ, ಬೆಪ್ಡೆ, ಹಂಜಾ, ಆರ್ಡಿ ಪ್ರದೇಶದಲ್ಲಿ ಸಂಜೆ ವೇಳೆ ಸಾಮಾನ್ಯ ಮಳೆಯಾಗಿದೆ.