ರಾಜಕೀಯ

ಐಎನ್‌ಡಿಐಎ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ, ಬಿಜೆಪಿ- ಎನ್‌ಡಿಎ 3ನೇ ಬಾರಿಗೆ ಗೆಲುವಿನ ಓಟಕ್ಕೆ ತಡೆ, ಮಮತಾ ಗೈರು

Views: 49

ನವದೆಹಲಿ, ವಿರೋಧ ಪಕ್ಷಗಳ ಮೈತ್ರಿಕೂಟ ಐಎನ್‌ಡಿಐಎ ಅಧ್ಯಕ್ಷರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಐಎನ್‌ಡಿಐಎ ಮೈತ್ರಿಕೂಟದ ಪಕ್ಷಗಳ ವರ್ಚುವಲ್ ಸಭೆ ಇಂದು ನಡೆದಿದ್ದು, ಈ ಸಭೆಯಲ್ಲಿ ಎಲ್ಲ ಪಕ್ಷಗಳು ಮೈತ್ರಿಕೂಟದ ಅಧ್ಯಕ್ಷರಾಗಿ ಖರ್ಗೆ ಅವರನ್ನು ನೇಮಕ ಮಾಡಲು ಸಮ್ಮತಿ ವ್ಯಕ್ತಪಡಿಸಿದವು. ಅದರಂತೆ ಮಲ್ಲಿಕಾರ್ಜುನ ಖರ್ಗೆ ಅವರು ಐಎನ್‌ಡಿಐಎದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವರು.

ಐಎನ್‌ಡಿಐಎ ಮೈತ್ರಿಕೂಟಕ್ಕೆ ಅಧ್ಯಕ್ಷರ ಆಯ್ಕೆ ಇಂದು ನಡೆದಿದೆಯಾದರೂ ಸಂಚಾಲಕರ ನೇಮಕದ ಬಗ್ಗೆ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.ಐಎನ್‌ಡಿಐಎ ಮೈತ್ರಿಕೂಟದ ಸಂಚಾಲಕರಾಗಿ ನಿತೀಶ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವಾದರೂ ನಿತೀಶ್‌ಕುಮಾರ್ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸಲು ಒಪ್ಪದಿರುವುದು ಸಂಚಾಲಕರ ಆಯ್ಕೆಗೆ ತೊಡಕಾಗಿದ್ದು, ಸಂಚಾಲಕರ ಆಯ್ಕೆ ಮತ್ತೆ ಮುಂದಕ್ಕೆ ಹೋಗಿದೆ.

ಐಎನ್‌ಡಿಐಎ ಮೈತ್ರಿಕೂಟದ ಪಕ್ಷಗಳ ನಡುವೆ ಸೀಟು ಹಂಚಿಕೆ ಅಂತಿಮಗೊಂಡಿಲ್ಲ. ಸೀಟು ಹಂಚಿಕೆ ಸವಾಲಾಗಿರುವಾಗಿ ಸಂಚಾಲಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ನಿತೀಶ್‌ಕುಮಾರ್ ಹೇಳಿ ಸಂಚಾಲಕರ ಹುದ್ದೆಯನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಇಂದಿನ ಐಎನ್‌ಡಿಐಎ ಸಭೆ ಮೈತ್ರಿಕೂಟದ ಅಧ್ಯಕ್ಷರ ಆಯ್ಕೆಗಷ್ಟೆ ಸೀಮಿತವಾಗಿತ್ತು. ಸಂಚಾಲಕರ ಆಯ್ಕೆ ಆಗಲಿಲ್ಲ.

ವರ್ಚುವಲ್ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣು ಗೋಪಾಲ್, ಎನ್ ಸಿಪಿ ನಾಯಕ ಶರದ್ ಪವಾರ್, ಡಿಎಂಕೆ ವತಿಯಿಂದ ಎಂ.ಕೆ ಸ್ಟಾಲಿನ್, ಕನಿಮೊಳಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಎಲ್ಲ ನಾಯಕರು ಭಾಗಿಯಾಗಿ, ಲೋಕ ಸಮರವನ್ನು ಜಂಟಿಯಾಗಿ ಎದುರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.

ಈ ಮೂಲಕ ಇಂಡಿಯಾ ಅಥವಾ ’ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ’ ಎಂಬುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಗುಂಪು ಬಿಜೆಪಿ- ಎನ್‌ಡಿಎ ಎದುರಿಸಲು ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಗೆಲ್ಲುವುದನ್ನು ತಡೆಯಲು ಪಕ್ಷಗಳು ಒಗ್ಗೂಡಿ ಹೋರಾಡಲು ಮುಂದಾಗಿವೆ

ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳು ಆದಷ್ಟು ಶೀಘ್ರ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಜೊತೆಯಾಗಿ ಚುನಾವಣಾ ರ್‍ಯಾಲಿ ನಡೆಸುವುದು ಮತ್ತು ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಸಾಧ್ಯವಾಗಲಿದೆ ಎನ್ನುವ ಒಲವು ವ್ಯಕ್ತಪಡಿಸಲಾಗಿದೆ.

ಮೈತ್ರಿಕೂಟದ ಹಿರಿಯ ನಾಯಕರು ಸೀಟು ಹಂಚಿಕೆ ಕುರಿತಂತೆ ತಮ್ಮ ತಮ್ಮ ಪಕ್ಷಗಳ ನಾಯಕರು ಚರ್ಚೆ ನಡೆಸಿರುವ ಪ್ರಾಥಮಿಕ ಮಾಹಿತಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪಕ್ಷಗಳ ನಡುವೆ ಸೀಟು ಹಂಚಿಕೆಯ ಮಾತುಕತೆಯಿಂದ ಹಲವಾರು ರಾಜ್ಯಗಳಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು ಕಾಪಾಡಿಕೊಳ್ಳುವ ಜೊತೆಗೆ ಇಂಡಿಯಾ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸಲು ರೂಪಿಸಬೇಕಾದ ಕಾರ್ಯತಂತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.

ಮಮತಾ ಗೈರು

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪೂರ್ವ ನಿರ್ಧಾರಿತ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ವರ್ಚುವಲ್ ಸಭೆಗೆ ಗೈರು ಹಾಜರಾಗುವ ಸಾಧ್ಯತೆಗಳಿವೆ. ಇತ್ತೀಚಿನ ದಿನಗಳಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ನಾಯಕರು ಈ ವಿಷಯದ ಬಗ್ಗೆ ವಾಗ್ದಾಳಿ ನಡೆಸಿದ್ದರಿಂದ ಮಮತಾ ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಕುರಿತು ಕಾಂಗ್ರೆಸ್‌ನೊಂದಿಗೆ ಜಗಳವಾಡುತ್ತಿದ್ದಾರೆ. ಗೈರು ಹಾಜರಿಗೆ ಇದೂ ಕಾರಣವಿರಬಹುದು ಎನ್ನಲಾಗಿದೆ.

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸಭೆಯ ಮಾಹಿತಿಯನ್ನು ಅಲ್ಪಾವಧಿಯ ಸೂಚನೆಯಲ್ಲಿ ನೀಡಲಾಗಿದೆ ಮತ್ತು ಹಾಜರಾಗಬಾರದು ಎಂದು ಹೇಳಿದೆ.

Related Articles

Back to top button
error: Content is protected !!