ರಾಮ ಮಂದಿರ ಉದ್ಘಾಟನೆಗೆ ಹೋಗದಿದ್ದರೆ ಚುನಾವಣಾ ಹೊಡೆತ ಬೀಳುವ ಆತಂಕ! ಹೈಕಮಾಂಡ್ ವಿರುದ್ಧ ‘ಕೈ’ನಾಯಕರ ಬೇಸರ!

Views: 62
ನವದೆಹಲಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಯಿಂದ ಕಾಂಗ್ರೆಸ್ ನಾಯಕರು ದೂರ ಉಳಿಯುತ್ತಿರೋದು ಪಕ್ಷದಲ್ಲೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಹೈಕಮಾಂಡ್ ನಿರ್ಧಾರಕ್ಕೆ ರಾಷ್ಟ್ರ ಮಟ್ಟದಲ್ಲಿ ಕೆಲ ನಾಯಕರು ಬಹಿರಂಗವಾಗಿಯೇ ಬೇಸರ ಹೊರ ಹಾಕುತ್ತಿದ್ದಾರೆ.
ಗುಜರಾತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರ್ಜುನ್ ಮೋಧ್ವಾಡಿಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು ಜನವರಿಂದ 22ರಂದು ನಡೆಯುವ ರಾಮ ಮಂದಿರ ಉದ್ಘಾಟನೆಗೆ ಭಾಗಿಯಾಗದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ. ಆದರೆ ಇದು ಲೋಕಸಭಾ ಚುನಾವಣೆಯನ್ನ ಎದುರಿಸುವ ಸಮಯ. ಈ ನಿರ್ಧಾರದಿಂದ ಕಾಂಗ್ರೆಸ್ಗೆ ಹೊಡೆತ ಬೀಳುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಹೋಗದಿದ್ರೆ ಲಾಭವಾಗದಿದ್ರೂ ನಷ್ಟವಾಗುತ್ತಿರಲಿಲ್ಲ. ಸಾಫ್ಟ್ ಹಿಂದುತ್ವದ ಬದಲು ಮಂದಿರ ಉದ್ಘಾಟನೆಗೆ ಹೋಗಬೇಕಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಉದ್ಘಾಟನೆಗೆ ಹೋಗದಿರುವ ನಿರ್ಧಾರ ಸರಿಯಲ್ಲ ಎಂದು ಅರ್ಜುನ್ ಮೋಧ್ವಾಡಿಯಾ ಹೇಳಿದ್ದಾರೆ.
ಈ ಹಿಂದೆ ರಾಹುಲ್ ಗಾಂಧಿ, ಪ್ರಿಯಾಂಕಾ ಅಯೋಧ್ಯೆಗೆ ಭೇಟಿ ನೀಡಿದ್ದ ವೇಳೆ ರಾಮನ ದರ್ಶನ ಮಾಡಿಲ್ಲ. ಈಗ ಮಂದಿರ ಉದ್ಘಾಟನೆಗೆ ಹೋಗುವುದಕ್ಕೂ ಬೇಡವೆಂದು ನಿರ್ಧಾರ ಮಾಡಲಾಗಿದೆ. ಶ್ರೀರಾಮ ಆರಾಧ್ಯ ದೈವ, ದೇಶವಾಸಿಗಳ ನಂಬಿಕೆ, ವಿಶ್ವಾಸದ ವಿಷಯ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಪ್ರಚಾರ ಮಾಡುವ ಸಾಧ್ಯತೆ ಇದೆ ಎಂದು ಅರ್ಜುನ್ ಮೋಧ್ವಾಡಿಯಾ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.






