ಕರಾವಳಿಯಾದ್ಯಂತ ಗುಡುಗು ಸಹಿತ ಗಾಳಿ-ಮಳೆ, ಜನಜೀವನ ಅಸ್ತವ್ಯಸ್ತ

Views: 50
ಉಡುಪಿ: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕರಾವಳಿ ಭಾಗದಲ್ಲಿ ಬಿರುಸಿನ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡ ಮತು ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ಗುಡುಗು, ಸಿಡಿಲು, ಗಾಳಿ ಸಹಿತ ಧಾರಾಕಾರ ಮಳೆ ಮುಂದುವರಿದಿದ್ದು, ಕೆಲವೆಡೆ ಹಾನಿ ಸಂಭವಿಸಿ, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕರಾವಳಿಯಾದ್ಯಂತ ರವಿವಾರ ತಡರಾತ್ರಿ ಧಾರಕಾರ ಮಳೆ ಸುರಿದಿದ್ದು, ಗುಡುಗು, ಸಿಡಿಲಿನ ಆರ್ಭಟಕ್ಕೆ ಕೆಲವು ಮನೆಗಳಲ್ಲಿ ಹಾನಿ ಸಂಭವಿಸಿದೆ ಕೆಲವೆಡೆ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು
ಉಡುಪಿ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ, ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ವಿಪರೀತ ಗಾಳಿ ಮಳೆಯಿಂದಾಗಿ ಹಲವು ಕಡೆ ವಿದ್ಯುತ್ ಕಂಬಗಳಿಗೆ, ಮನೆಗಳಿಗೆ ಹಾನಿಯುಂಟಾಗಿದೆ
ಉಡುಪಿ, ಕಾಪು, ಬ್ರಹ್ಮಾವರ,ಕೋಟ, ತೆಕ್ಕಟ್ಟೆ,ಹಾಲಾಡಿ, ಕೋಟೇಶ್ವರ, ಕುಂದಾಪುರ, ಮರವಂತೆ, ಉಪ್ಪುನೀರು, ಬೈಂದೂರು, ಹೆಬ್ರಿ, ಕಾರ್ಕಳ ಸುತ್ತಮುತ್ತಲಿನ ಭಾಗದಲ್ಲಿ ಬಿಟ್ಟುಬಿಟ್ಟು ಉತ್ತಮ ಮಳೆಯಾಗಿದೆ. ಗಾಳಿ ಮಳೆಗೆ ಕಾಪು ಬೈಂದೂರಿನ ಕೆಲವು ಮನೆಗಳಿಗೆ ಹಾನಿ ಸಂಭವಿಸಿದೆ.
ದ.ಕ ಜಿಲ್ಲೆಯ ಬೆಳ್ತಂಗಡಿ, ಉಜಿರೆ, ಮಡಂತ್ಯಾರು, ಗುರುವಾಯನಕೆರೆ, ನಾರಾವಿ, ಧರ್ಮಸ್ಥಳ, ನೆಲ್ಯಾಡಿ, ಬಂಟ್ವಾಳ, ವಿಟ್ಲ, ಕನ್ಯಾನ, ಬದಿಯಡ್ಕ, ಉಪ್ಪಿನಂಗಡಿ, ಪುತ್ತೂರು, ಕಡಬ, ಬೆಟ್ಟಂಪಾಡಿ, ಸುಬ್ರಹ್ಮಣ್ಯ, ಸುಳ್ಯ, ಸುಬ್ರಹ್ಮಣ್ಯ, ಪಂಜ, ಉಳ್ಳಾಲ, ಸುರತ್ಕಲ್, ಮೂಡುಬಿದಿರೆ ಸಹಿತ ಜಿಲ್ಲೆಯ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಮಳೆಯ ಪರಿಣಾಮ ಒದ್ದೆಯಾಗಿದೆ.ಉದ್ದು,ನೆಲಗಡಲೆ ಇನ್ನಿತರ ಧಾನ್ಯಗಳಿಗೆ ತೊಂದರೆಯಾಗಿದೆ.
ಮಂಗಳವಾರ ನಗರದಲ್ಲಿ ಸುರಿದ ಮಳೆಗೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಉಂಟಾಗಿದೆ. ಕೆಲವು ಕಡೆ ಪ್ರದರ್ಶನ ರದ್ದುಗೊಂಡಿದೆ.
ಕರಾವಳಿ ಭಾಗದಲ್ಲಿ ಬಿರುಸಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಮಳೆ, ಗಾಳಿ ಇರುವ ಸಾಧ್ಯತೆ ಇದೆ ಎಂದು ತಿಳಿಸಿದೆ.