ರಾಜಕೀಯ

ನಿರುದ್ಯೋಗಿಗಳಿಗೆ ಗುಡ್​ನ್ಯೂಸ್, ಬೃಹತ್ ಉದ್ಯೋಗ ಮೇಳ ನಡೆಸಲು ತೀರ್ಮಾನಿಸಿದ ಸರ್ಕಾರ

Views: 10

ಬೆಂಗಳೂರು, ವಿಧಾನಸಭೆ ಚುನಾವಣೆ ನೀಡಿದ್ದ ಭರವಸೆಯಂತೆ ಹಾಗೂ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಸೆರ್ಕಾರದ ಕಣ್ಣು ಯುವಕರ ಮೇಲೆ ಬಿದ್ದಿದೆ. ಚುನಾವಣೆಯಲ್ಲಿ ಯುವ ಶಕ್ತಿಯನ್ನು ಸೆಳೆಯಲು ರಾಜ್ಯ ಸರ್ಕಾರ ಬೃಹತ್ ಉದ್ಯೋಗ ಮೇಳ ನಡೆಸಲು ತೀರ್ಮಾನಿಸಿದೆ.

ಇನ್ನು ಈ ಸಂಬಂಧ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಜನವರಿ ಕೊನೆಯ ವಾರದಲ್ಲಿ ಸರ್ಕಾರದಿಂದಲೇ ರಾಜ್ಯಮಟ್ಟದ ಉದ್ಯೋಗ ಮೇಳ ನಡೆಸಲು ತೀರ್ಮಾನವಾಗಿದೆ.

ಸರ್ಕಾರದ ವತಿಯಿಂದಲೇ ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲು ಉದ್ದೇಶಿಸಲಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಆಯೋಜಿಸಲೂ 6 ಸಚಿವರನ್ನೊಳಗೊಂದ ತಂಡ ರಚನೆ ಮಾಡಲಾಗಿದೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಐಟಿ, ಬಿಟಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಕೌಶಲ್ಯಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನೊಳಗೊಂಡ ಸಚಿವರ ತಂಡ ರಚನೆ ಮಾಡಲಾಗಿದ್ದು, ಉದ್ಯೋಗದಾತರೊಂದಿಗೆ ಸಭೆ ನಡೆಸಿ ಈ ಕುರಿತು ಚರ್ಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಕೈಗಾರಿಕೆಗಳ ಅಗತ್ಯತೆಯ ನಡುವಿನ ಅಂತರ ಸರಿಪಡಿಸುವ ಬಗ್ಗೆ ದೂರಗಾಮಿ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆಯೂ ಶಿಫಾರಸುಗಳನ್ನು ಮಾಡುವಂತೆ ಸಚಿವರ ತಂಡಕ್ಕೆ ಸೂಚನೆ ನೀಡಲಾಗಿದೆ. ವಿದೇಶದಲ್ಲಿರುವ ಉದ್ಯೋಗಾವಕಾಶಗಳ ಕುರಿತೂ ಸಹ ಪರಿಶೀಲಿಸಲು ಸಿಎಂ ಸೂಚಿಸಿದ್ದಾರೆ. ಇದಲ್ಲದೆ ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಉದ್ಯೋಗ ನೀತಿಯನ್ನು ಹೊಂದುವ ಅಗತ್ಯವಿದೆ. ಈ ನೀತಿಯನ್ನು ರೂಪಿಸಲು ಸಿದ್ಧತೆ ನಡೆಸುವಂತೆ ಸಿಎಂ ತಾಕೀತು ಮಾಡಿದರು.

Related Articles

Back to top button
error: Content is protected !!