ರಾಜಕೀಯ

ಹಿಂದೂ ರಾಷ್ಟ್ರ ಆಗೋದನ್ನು ತಡೆಯಲಿ: ಅನಂತ ಕುಮಾರ ಹೆಗಡೆ 

Views: 0

ಶಿರಸಿ: ರಾಜ್ಯದಲ್ಲಿರುವುದು ಹಿಜಾಬ್‌ ಹಿಂದೆ ತಿರುಗುವ ಕಾಂಗ್ರೆಸ್‌ ಸರ್ಕಾರ. ಸಮವಸ್ತ್ರದ ಕಲ್ಪನೆಯೇ ಇಲ್ಲದ ಸಿಎಂ ಸಿದ್ದರಾಮಯ್ಯ ಹಿಜಾಬ್‌ ನಿಷೇಧ ವಾಪಸ್‌ ಪಡೆಯುವ ಮಾತನಾಡಿದ್ದಾರೆ. ಅವರಿಗೆ ತಾಕತ್ತಿದ್ದರೆ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂದು ಸಂಸದ ಅನಂತಕುಮಾರ ಹೆಗಡೆ ಸವಾಲು ಹಾಕಿದರು‌.

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಹಿಂದೂ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆ ಗುರುತಾಗಿದ್ದು, ಇದು ಈ ಶತಮಾನದ ಸಂಭ್ರಮ. ರಾಜ್ಯದಲ್ಲಿ ಹಿಜಾಬ್‌ ಹಿಂದೆ ತಿರುಗುವ ಕಾಂಗ್ರೆಸ್‌ ಸರ್ಕಾರವಿದೆ. ಕೇವಲ ಓಲೈಕೆ ರಾಜಕಾರಣ ಮಾಡುವುದು ಇವರ ಜಾಯಮಾನ. ಅಲ್ಪಸಂಖ್ಯಾತರ ಮತ ಇಲ್ಲದೆ ಕಾಂಗ್ರೆಸ್‌ ಬದುಕಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ ಮೊದಲಿನಿಂದಲೂ ಬಹುಸಂಖ್ಯಾತರ ಪರ ರಾಜಕಾರಣ ಮಾಡಿಲ್ಲ. ಇಂಥ ಓಲೈಕೆ ಸರ್ಕಾರದ ಸಿಎಂಗೆ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ನೋಡೋಣ ಎಂದರು.

ಯಾರು ಯಾವುದೇ ರೀತಿಯ ಬಟ್ಟೆ ಹಾಕಿಕೊಳ್ಳಬಹುದು ಎಂಬ ಸಿದ್ದರಾಮಯ್ಯ ಹೇಳಿಕೆ ಭವಿಷ್ಯದಲ್ಲಿ ಹಲವು ಸಮಸ್ಯೆಗೆ ಕಾರಣವಾಗಲಿದೆ. ಸಾಮಾಜಿಕ ಚೌಕಟ್ಟಿನ ಕಲ್ಪನೆಯೇ ಇಲ್ಲದ ಈ ಸರ್ಕಾರದ ಸಿಎಂ ಸಮವಸ್ತ್ರ ಕಲ್ಪನೆ ಬಿಟ್ಟು ಬೇಕಾಬಿಟ್ಟಿ ಹೇಳಿಕೆ ನೀಡುವುದು ಸರಿಯಲ್ಲ. ಇಂಥ ಹಿಂದೂ ವಿರೋಧಿ ಸರ್ಕಾರ ಕರ್ನಾಟಕದಲ್ಲಿ ಬಹಳ ದಿನ ಇರಲು ಸಾಧ್ಯವಿಲ್ಲ. ಟಿಪ್ಪು ಈ ರಾಜ್ಯದ ಜನ ತೆಗೆದಿಟ್ಟ ವ್ಯಕ್ತಿ. ಈ ರಾಜ್ಯವನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ತೊಂದರೆಗೆ ದೂಡಿದ ವ್ಯಕ್ತಿ. ಆದರೆ ಅವನ ಹೆಸರನ್ನೇ ಬಳಸಿಕೊಂಡು ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ ಎಂದರು.

ಪಕ್ಷದ ಕಾರ್ಯಕರ್ತರು ನನ್ನಿಂದ ಈವರೆಗೆ ಏನನ್ನೂ ನಿರೀಕ್ಷೆ ಮಾಡಿಲ್ಲ. ನನ್ನ ಹಾಗೂ ಕಾರ್ಯಕರ್ತರ ನಡುವಿನ ಸಂಬಂಧ ಮಾತಿನಲ್ಲಿ ಬಣ್ಣಿಸಲಾಗದು. ಪ್ರಸ್ತುತ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಕಾರ್ಯಕರ್ತರು ಒತ್ತಾಯ ಮಾಡಿದಾಗ ತಿರಸ್ಕರಿಸುವುದು ಮೂರ್ಖತನವಾಗುತ್ತದೆ ಎಂದರು.

Related Articles

Back to top button
error: Content is protected !!