ಚುನಾವಣಾ ರಾಜಕೀಯದಿಂದ ನಿವೃತ್ತಿ ಸುಳಿವು ನೀಡಿದ ಚಿತ್ರದುರ್ಗದ ಬಿಜೆಪಿ ಸಂಸದ ?

Views: 90
ಚಿತ್ರದುರ್ಗ,2024 ರ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ಈ ಬಾರಿಯೂ ಟಿಕೆಟ್ ಹಂಚಿಕೆಯಲ್ಲಿ ಹೊಸ ಸೂತ್ರವನ್ನು ಅನುಸರಿಸಲಿದೆ. ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಸದಾನಂದಗೌಡ ಅವರ ಬಳಿಕ ಮತ್ತೊಬ್ಬ ಬಿಜೆಪಿ ಸಂಸದ ರಾಜಕೀಯ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ.
ಬಿಜೆಪಿಯ ಸಂಸದರಾದ ಶ್ರೀನಿವಾಸ್ ಪ್ರಸಾದ್, ಬಚ್ಚೇಗೌಡ, ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಭಾಗದ ಸಂಸದರಾದ ಡಿ ವಿ ಸದಾನಂದ ಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬಳಿಕ ಚಿತ್ರದುರ್ಗ ಸಂಸದ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಪರೋಕ್ಷವಾಗಿ ರಾಜಕೀಯ ನಿವೃತ್ತಿ ಸುಳಿವು ನೀಡಿದ್ದಾರೆ.
ಈ ವಿಚಾರವಾಗಿ ಶುಕ್ರವಾರ ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿಂದ MBBS ವಿಧ್ಯಾರ್ಥಿಗಳ ವೈಟ್ ಕೋಟ್ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಇಂತಹ ಪೊಲಿಟೆಡ್ ಪಾಲಿಟಿಕ್ಸ್ನಲ್ಲಿ ನನ್ನಂತವರು ಇರಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಈಗಿನ ರಾಜಕೀಯ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿ ನಿವೃತ್ತಿಯಾಗುವ ಮಾತುಗಳನ್ನಾಡಿದ್ದಾರೆ.
ಭ್ರಷ್ಟಾಚಾರದ ಕುರ್ಚಿಯ ಪಕ್ಕದಲ್ಲಿಯೂ ಕುಳಿತುಕೊಳ್ಳಲು ಇಷ್ಟ ಪಡುವುದಿಲ್ಲ, ರಾಜಕಾರಣದಲ್ಲಿರುವ ಭ್ರಷ್ಟಾಚಾರ ಕಣ್ಣಿಗೆ ಬಿದ್ದಾಗಲೇ ಈ ನಿರ್ಧಾರ ಕೈಗೊಂಡಿದ್ದೇನೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಲ್ಲ. ಭವಿಷ್ಯದ ರಾಜಕಾರಣದಿಂದಲೇ ಹೊರಗುಳಿಯುವೆ ಎಂದು ಸ್ಪಷ್ಟಪಡಿಸಿದರು.
ದೂರರಿಂದ ಚಿತ್ರದುರ್ಗಕ್ಕೆ ಬಂದಿದ್ದ ನನ್ನನ್ನು ಮತದಾರರು ಲೋಕಸಭೆಗೆ ಆಯ್ಕೆ ಮಾಡಿದ್ದಾರೆ. ಆದ್ರೆ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂಬ ಕೊರಗು ಇದೆ ಮುಂಬರುವ ಚುನಾವಣೆಯಲ್ಲಿ ಸ್ಥಳೀಯರಿಗೆ ಅವಕಾಶ ಸಿಕ್ಕರೆ ನಾನು ಸ್ವಾಗತಿಸುತ್ತೇನೆ. ಆಂತರಿಕ ಸಮೀಕ್ಷೆ ಆಧರಿಸಿ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳುವ ಮೂಲಕ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಅವರು ಈ ಬಾರಿ ಟಿಕೆಟ್ ಆಕಾಕ್ಷಿಯಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದು, ರಾಜಕಾರಣದಿಂದ ದೂರು ಉಳಿಯುವ ಬಗ್ಗೆ ಸುಳಿವು ನೀಡಿದ್ದಾರೆ.
ನನ್ನ 25 ವರ್ಷದ ರಾಜಕೀಯ ಜೀವನದಲ್ಲಿ ಭ್ರಷ್ಟ ವ್ಯವಸ್ಥೆ ನೋಡಿದ್ದೇನೆ. ಇಂತಹ ಭ್ರಷ್ಟ ವ್ಯವಸ್ಥೆಯನ್ನು ಧಿಕ್ಕರಿಸಿ ರಾಜಕೀಯ ಬಿಡೋಣ ಅಂತಿದೀನಿ. ಈ ಭ್ರಷ್ಟರ ಜೊತೆ ನಾನು ಒಬ್ಬ ಆಗಬಾರದು. ನಾನು ಇವರ ಜೊತೆ ರಾಜಿ ಆಗಬಾರದು. ಇಂತಹ ಪೊಲಿಟೆಡ್ ಪಾಲಿಟಿಕ್ಸ್ನಲ್ಲಿ ನನ್ನಂತವರು ಇರಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದು ಪರೋಕ್ಷವಾಗಿ ರಾಜಕೀಯ ನಿವೃತ್ತಿಯ ಕುರಿತು ಮಾತನಾಡಿದ್ದಾರೆ.






