ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಖಾಡಕ್ಕೆ ಬಿಜೆಪಿಯಿಂದ ಸಿ.ಟಿ.ರವಿ ಕಾಂಗ್ರೆಸ್ ನಿಂದ ಜಯಪ್ರಕಾಶ್ ಹೆಗ್ಡೆ!?

Views: 18
1952ರಿಂದ 2009ರ ತನಕ ಉಡುಪಿ ಮತ್ತು ಚಿಕ್ಕಮಗಳೂರು ಎರಡು ಪ್ರತ್ಯೇಕ ಪಾರ್ಲಿಮೆಂಟ್ ಕ್ಷೇತ್ರಗಳಾಗಿದ್ದವು. ಉಡುಪಿ ಕ್ಷೇತ್ರದಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಎಂಟು ಅಸೆಂಬ್ಲಿ ಕಾನ್ಸ್ಟಿಟ್ಯೂಯೆನ್ಸಿಗಳಿದ್ದವು. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳೊಂದಿಗೆ ಅಂದಿನ ದಕ್ಷಿಣ ಕನ್ನಡದ ಕಾರ್ಕಳ ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಚಿಕ್ಕಮಗಳೂರು ಲೋಕ ಅಖಾಡವನ್ನು ರಚಿಸಲಾಗಿತ್ತು. ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿದ ದಿಗ್ಗಜರು ಎಂಪಿಗಳಾಗಿದ್ದಾರೆ. ಉಳ್ಳಾಲ ಶ್ರೀನಿವಾಸ್ ಮಲ್ಯ, ರಂಗನಾಥ ಶೆಣೈ, ಟಿ.ಎಂ.ಎ.ಪೈ ಮತ್ತು ಆಸ್ಕರ್ ಫರ್ನಾಂಡಿಸ್ ಸಂಸದರಾಗಿದ್ದರು; ಡಿ.ಬಿ.ಚಂದ್ರೇಗೌಡ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಡಿ.ಕೆ.ತಾರಾದೇವಿ, ಬಿ.ಎಲ್.ಶಂಕರ್ರಂಥವರು ಲೋಕಸಭೆಯಲ್ಲಿ ಚಿಕ್ಕಮಗಳೂರನ್ನು ಪ್ರತಿನಿಧಿಸಿದ್ದರು.
ತುರ್ತು ಪರಿಸ್ಥಿತಿಯ ಅತಿರೇಕದಿಂದ ಇಡೀ ಭಾರತದ ವಿರೋಧ ಕಟ್ಟಿಕೊಂಡಿದ್ದ ಇಂದಿರಾ ಗಾಂಧಿ 1977ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಅಷ್ಟೇ ಅಲ್ಲ, ಮಾಜಿ ಸಂಸದೆಯೂ ಆಗಿದ್ದರು. ಇಂದಿರಾರನ್ನು ಜನತಾ ಪಕ್ಷದ ಸರಕಾರ ಜೈಲಿಗೂ ಕಳುಹಿಸಿತ್ತು. ಇನ್ನೇನು ತನ್ನ ರಾಜಕೀಯ ಜೀವನದ ಅವಸಾನವಾಯಿತು ಎಂದು ಕಂಗಾಲಾಗಿ ಮನೆಯಲ್ಲಿ ಕುಳಿತಿದ್ದ ಇಂದಿರಾಗೆ ಅಂದಿನ ಕರ್ನಾಟಕ ಮುಖ್ಯಮಂತ್ರಿ ದೇವರಾಜ ಅರಸು ಚಿಕ್ಕಮಗಳೂರಿಂದ ಸಂಸತ್ತಿಗೆ ಕಳಿಸುವ ಯೋಜನೆ ಹಾಕಿದ್ದರು. ಚಿಕ್ಕಮಗಳೂರಿನ ಎಂಪಿಯಾಗಿದ್ದ ಡಿ.ಬಿ.ಚಂದ್ರೇಗೌಡರಿಂದ ರಾಜೀನಾಮೆ ಕೊಡಿಸಿ ಕ್ಷೇತ್ರ ಖಾಲಿ ಮಾಡಿಸಿದರು. ಚಂದ್ರೇಗೌಡರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ನೀರಾವರಿ ಮಂತ್ರಿಗಿರಿ ಕೊಟ್ಟರು; ಚಿಕ್ಕಮಗಳೂರಿನ ಉಪಚುನಾವಣೆ ಅಖಾಡದಲ್ಲಿ ಅಂದಿನ ಸಂಯುಕ್ತ ಜನತಾ ಪಕ್ಷದ ದಿಗ್ಗಜ-ಮಾಜಿ ಸಿಎಂ ವೀರೇಂದ್ರ ಪಾಟೀಲ್ ಮತ್ತು ಇಂದಿರಾ ಗಾಂಧಿ (ದೇವರಾಜ್ ಅರಸು ಅವರೇ ಅಭ್ಯರ್ಥಿ ಎಂಬಂತಿತ್ತು) ನಡುವೆ ರಣರೋಚಕ ಹಣಾಹಣಿಯೇ ನಡೆದುಹೋಯಿತು. ಇಂದಿರಾ ಗೆದ್ದು ಸಂಸತ್ ಪ್ರವೇಶಿಸಿ ರಾಜಕೀಯ ಮರುಹುಟ್ಟು ಪಡೆದರು! ಚಿಕ್ಕಮಗಳೂರು ಜಾಗತಿಕ ಮಟ್ಟದಲ್ಲಿ ಸುದ್ದಿಯಾಯಿತು. ಆ “ಖ್ಯಾತಿ” ಇವತ್ತಿಗೂ ಚಿಕ್ಕಮಗಳೂರಿಗಿದೆ.
ಡಿಲಿಮಿಟೇಷನ್ ಆಫ್ ಇಂಡಿಯಾದ ಶಿಫಾರಸ್ಸಿನಂತೆ 2008ರಲ್ಲಾದ ಲೋಕಸಭಾ ಕ್ಷೇತ್ರಗಳ ಪುನರ್ರಚನೆ ಪ್ರಕ್ರಿಯೆಯಲ್ಲಿ ಚಿಕ್ಕಮಗಳೂರು ಲೋಕ ಪೈಪೋಟಿಯ ಅಂಕಣದ ಚಹರೆಯಲ್ಲಿ ಮಹತ್ವದ ಬದಲಾವಣೆಯಾಯಿತು. 2009ರ ಚುನಾವಣೆಯ ಸಂದರ್ಭದಲ್ಲಿ ಮಲೆನಾಡಿನ ತಪ್ಪಲಿನ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಶೃಂಗೇರಿ ಮತ್ತು ಮೂಡಿಗೆರೆ ಮತ್ತು ಕಡಲ ತಡಿಯ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು ಹಾಗು ಕಾರ್ಕಳ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ “ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ” ಎಂಬ ಹೆಸರಿನ ಹೊಸ ಕ್ಷೇತ್ರವನ್ನು ರಚಿಸಲಾಯಿತು. ಅರ್ಧ ತಂಪು ಹವಾಮಾನ ಇನ್ನರ್ಧ ಶುಷ್ಕ ವಾತಾವರಣದ ಈ ಲೋಕಸಭಾ ಕ್ಷೇತ್ರದ ಮೊದಲ ಸಂಸದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ. ಎರಡು ಬಾರಿ ಮಂಗಳೂರು ಕ್ಷೇತ್ರದಿಂದ ಸಂಸದರಾಗಿದ್ದ ಸದಾನಂದ ಗೌಡರಿಗೆ ಅಲ್ಲಿ ಎಂಟಿಇನ್ಕಂಬೆನ್ಸ್ ಭಯ ಶುರುವಾಗಿತ್ತು;
ಆದರೆ ಘಟ್ಟದ ಮೇಲೆ ಮತ್ತು ಕೆಳಗೆ ಸಂಘ ಪರಿವಾರ ಹುಟ್ಟುಹಾಕಿದ್ದ ಹಿಂದುತ್ವದ ವಿಭಜಕ ರಾಜಕಾರಣ ಪ್ರಬಲವಾಗಿದ್ದರಿಂದ ಸದಾನಂದ ಗೌಡರು ಗೆದ್ದು ದಿಲ್ಲಿ ವಿಮಾನ ಹತ್ತಲು ಅನುಕೂಲವಾಯಿತು. 2011ರಲ್ಲಿ ಗಣಿ ಧಣಿ ರೆಡ್ಡಿ ತಂಡದ ವ್ಯಾವಹಾರಿಕ ರಾಜಕಾರಣದ ಕಿರುಕುಳ ಮತ್ತು ಇನ್ನೊಂದೆಡೆ ಭಿನ್ನಮತೀಯರ ಬಣದ ಪ್ರಚಂಡ ಬೊಬ್ಬೆಗೆ ಹೈರಾಣಾಗಿದ್ದ ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗ ಸದಾನಂದ ಗೌಡರಿಗೆ ಮುಖ್ಯಮಂತ್ರಿ ಯೋಗ ಖುಲಾಯಿಸಿತ್ತು. ಸದಾನಂದ ಗೌಡ ಚಿಕ್ಕಮಗಳೂರು-ಉಡುಪಿ ಎಂಪಿ ಸ್ಥಾನ ತೆರವು ಮಾಡಬೇಕಾಯಿತು; ಉಪಚುನಾವಣೆ(2012)ಯಲ್ಲಿ ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ ವಿಜಯಿಯಾದರು; ಬಿಜೆಪಿಯ ಸುನಿಲ್ಕುಮಾರ್ಗೆ ಗೆಲ್ಲಲಾಗಲಿಲ್ಲ.
2009ರಲ್ಲಿ ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ ಎದುರು ಕೇವಲ 27,018 ಮತದಿಂದ ದಡ ತಲುಪಿದ್ದ ಸದಾನಂದ ಗೌಡರಿಗೆ 2014ರಲ್ಲಿ ಮತ್ತೆ ಚಿಕ್ಕಮಗಳೂರಿನಲ್ಲಿ ಚುನಾವಣೆ ಎದುರಿಸುವ ಧೈರ್ಯವಿರಲಿಲ್ಲ. ಸದಾನಂದ ಗೌಡರ ಮೇಲೆ ಸಿಟ್ಟಾಗಿದ್ದ ಯಡಿಯೂರಪ್ಪ ತಮ್ಮ ಪರಮಾಪ್ತೆ ಶೋಭಾ ಕರಂದ್ಲಾಜೆಗೆ ಚಿಕ್ಕಮಗಳೂರಲ್ಲಿ ನೆಲೆ ಕಲ್ಪಿಸುವ ಪ್ರಯತ್ನದಲ್ಲಿದ್ದರು. ಒಕ್ಕಲಿಗರ ಬಾಹುಳ್ಯದ ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಕಣ್ಣುಹಾಕಿದ್ದ ಸದಾನಂದ ಗೌಡ ಆರೆಸ್ಸೆಸ್ನ ಆಶ್ರಯದಾತರನ್ನು ಹಿಡಿದುಕೊಂಡು ಟಿಕೆಟ್ ಪಡೆದುಕೊಂಡರು. ಸುಳ್ಯದ ಅರೆ ಭಾಷೆ ಗೌಡ ಸಮುದಾಯದ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಲ್ಲಿ ಬಿಜೆಪಿ ಕ್ಯಾಂಡಿಡೇಟಾದರು. ಸದಾನಂದಗೌಡರಂತೆಯೇ ಶೋಭಾ ಕರಂದ್ಲಾಜೆ ಜನಪರ ಕೆಲಸಗಾರ ಇಮೇಜಿನ ಜಯಪ್ರಕಾಶ್ ಹೆಗಡೆ ಎದುರು ತಿಣುಕಾಡಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದರು. ಆದರೆ 2014 ಚುನಾವಣಾ ಅಖಾಡದಲ್ಲಿ ಸಂಘ ಪರಿವಾರ ಮತೀಯ ರಾಜಕಾರಣದ ಚಾಂಪಿಯನ್ ಮೋದಿ ಮುಖ ಮುಂದಿಟ್ಟು ಮಾಡಿದ ಧರ್ಮಕಾರಣದ ತಂತ್ರಗಾರಿಕೆಯ ಲಾಭ ಶೋಭಾ ಕರಂದ್ಲಾಜೆಗೆ ದಕ್ಕಿತು.
ಶೋಭಾ 2019ರ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಜನರ ತಾತ್ಸಾರ-ತಿರಸ್ಕಾರಕ್ಕೆ ತುತ್ತಾಗಿದ್ದರು. ಕ್ಷೇತ್ರವನ್ನು ಕಡೆಗಣಿಸಿ ಸ್ವಹಿತದ ದಿಲ್ಲಿ, ಬೆಂಗಳೂರು ರಾಜಕಾರಣದಲ್ಲಿ ಮೈಮರೆತ, ಅಭಿವೃದ್ಧಿ ಯೋಜನೆಗಳ್ಯಾವುದನ್ನೂ ತರಲು ಪ್ರಯತ್ನಿಸದ ಮತ್ತು ನೊಂದವರ ಕೈಗೆಟುಕದ ಗಂಭೀರ ಆರೋಪ ಶೋಭಾ ಮೇಲೆ ಕೇಳಿಬಂದಿತ್ತು. ಆ ವೇಳೆಗೆ ಜಯಪ್ರಕಾಶ್ ಹೆಗ್ಡೆ ಕರಾವಳಿ ಕಾಂಗ್ರೆಸ್ನ ಪರವೋಚ್ಛ ನಾಯಕ ಆಸ್ಕರ್ ಫರ್ನಾಂಡಿಸ್ ಜತೆ ಜಗಳವಾಡಿ ಬಿಜೆಪಿ ಸೇರಿದ್ದರು. ಒಮ್ಮೆ ಕಾಂಗ್ರೆಸ್ನಿಂದ ಎಂಪಿಯಾಗಿದ್ದ ಜಯಪ್ರಕಾಶ್ ಹೆಗ್ಡೆ ಸಂಸತ್ ಸದಸ್ಯತ್ವದ ಬದ್ಧತೆಯಿಂದ ಕ್ಷೇತ್ರದಲ್ಲಿ ಪರಿಚಿತರಾಗಿದ್ದರು; ಶೋಭಾ ಅವರಿಗಿಂತ ಹೆಚ್ಚು ಜನಾನುರಾಗಿ ಮತ್ತು ಪ್ರಭಾವಿ ಎನಿಸಿಕೊಂಡಿದ್ದರು. ಬಿಜೆಪಿಯಲ್ಲಿ ಶೋಭಾಗೆ ಟಿಕೆಟ್ ಕೊಡಕೂಡದೆಂಬ ಕೂಗೆದ್ದಿತ್ತು. ಜಯಪ್ರಕಾಶ್ ಹೆಗ್ಡೆಯನ್ನು ಬಿಜೆಪಿ ಅಭ್ಯರ್ಥಿ ಮಾಡಬೇಕೆಂಬ ಒತ್ತಾಯ ಜೋರಾಗಿತ್ತು. “ಗೋ ಬ್ಯಾಕ್ ಶೋಭಾ”ಎಂಬ ಅಭಿಯಾನವೂ ಸಾಮಾಜಿಕ ಜಾಲತಾಣದಲ್ಲಿ ಬಿರುಸು ಪಡೆದುಕೊಂಡಿತ್ತು. ಸಂಘ ಶ್ರೇಷ್ಠರ ಮತ್ತು ಯಡಿಯೂರಪ್ಪರ ಕೃಪಾಶೀರ್ವಾದದ ಶೋಭರನ್ನು ಮಣಿಸಿ ಟಿಕೆಟ್ ಪಡೆಯಲು “ಹಿಂದುತ್ವದ ಪ್ರೊಬೇಷನರಿ ಪೀರಿಯಡ್”ನಲ್ಲಿದ್ದ ಹೆಗ್ಡೆಗೆ ಸಾಧ್ಯವಾಗಲಿಲ್ಲ ಎಂದು ಅಂದು ವ್ಯಾಖ್ಯಾನಿಸಲಾಗಿತ್ತು.
ಶೋಭಾಗೆ ಬಿಜೆಪಿ ಕ್ಯಾಂಡಿಡೇಟಾಗಲು ಆದಷ್ಟು ಕಷ್ಟ ಚುನಾವಣೆ ಸೆಣಸಾಟದಲ್ಲಿ ಆಗಲಿಲ್ಲ. ದೇಶದಾದ್ಯಂತ ಪುಲ್ವಾಮಾ ಘಟನೆಯನ್ನು ಚುನಾವಣೆಗೆ ಬಳಸಿಕೊಂಡಿದ್ದ ಬಿಜೆಪಿ ಉಡುಪಿ-ಚಿಕ್ಕಮಗಳೂರಿನಲ್ಲೂ ಮತೀಯ ಮತ ಧ್ರುವೀಕರಣವನ್ನು ಈ ಬಾರಿಯೂ ಸುಲಭವಾಗಿ ಸಾಧಿಸಿತ್ತು. ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ನೊಂದಿಗಿನ ಸೀಟು ಹೊಂದಾಣಿಕೆಯಲ್ಲಿ ಕ್ಷೇತ್ರದಲ್ಲಿ ನೆಲೆ-ಬೆಲೆಯೇ ಇಲ್ಲದ ಜೆಡಿಎಸ್ ಉಡುಪಿ-ಚಿಕ್ಕಮಗಳೂರನ್ನು ಹಠಹಿಡಿದು ಪಡೆದುಕೊಂಡಿತ್ತು. ತಮಾಷೆಯೆಂದರೆ, ಜೆಡಿಎಸ್ಗಿಲ್ಲಿ ಹುರಿಯಾಳೇ ಇರಲಿಲ್ಲ. ಮಲೆನಾಡಿನಲ್ಲಿ ಬಿಡಿ, ಕರಾವಳಿಯಲ್ಲೂ ಯಾವುದೇ ಚರಿಷ್ಮಾ ಇಲ್ಲದ ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್ರನ್ನು ಕಾಂಗ್ರೆಸ್ನಿಂದ ಎರವಲು ಪಡೆದು ಜೆಡಿಎಸ್ ಕಣಕ್ಕಿಳಿಸಿತ್ತು ಚುನಾವಣೆಗೆ ಧುಮುಕಿದ್ದ ಪ್ರಮೋದ್ ಮಧ್ವರಾಜ್ 3,49,599 ಮತಗಳ ಆಗಾಧ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದ್ದರು. ಕರಾವಳಿಯ ಸ್ವಜಾತಿ ಮೊಗವೀರರ ಮತಗಳನ್ನೂ ಪಡೆಯಲಾಗದ ತೀರಾ ದುರ್ಬಲ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್ ತಮ್ಮ ಸೋಲಿನ ಬೆನ್ನಿಗೇ ಜೆಡಿಎಸ್ಗೆ ಗುಡ್ಬೈ ಹೇಳಿ ಕಾಂಗ್ರೆಸ್ ಸೇರಿಕೊಂಡಿದ್ದರು. ನಂತರ 2023ರ ವಿಧಾನಸಭಾ ಚುನಾವಣೆಗೂ ಮೊದಲು ಬಿಜೆಪಿ ಸೇರಿದರು!
ಹಾಲಿ ಸಂಸದೆ-ಕೇಂದ್ರದ ಮಂತ್ರಿ ಶೋಭಾ ಕರಂದ್ಲಾಜೆ ಬಗ್ಗೆ ಕ್ಷೇತ್ರದ ಉದ್ದಗಲಕ್ಕೆ ದೊಡ್ಡ ಪ್ರಮಾಣದಲ್ಲಿ ಅಸಮಾಧಾನವಿದೆ. ಎರಡೆರಡು ಬಾರಿ ಎಂಪಿಯಾಗಿಸಿದರೂ ಕೇಂದ್ರದಲ್ಲಿ ಸಚಿವೆಯಾಗಿದ್ದರೂ ಕ್ಷೇತ್ರಕ್ಕೆ ಶೋಭಾರಿಂದ ಹೇಳಿ ಕೊಳ್ಳುವಷ್ಟು ಪ್ರಯೋಜನವಾಗಿಲ್ಲ ಎಂಬ ಸಿಟ್ಟು ಉಡುಪಿ ಮತ್ತು ಚಿಕ್ಕಮಗಳೂರು ಎರಡೂ ಏರಿಯಾದಲ್ಲಿ ಸಮನಾಗಿ ಮಡುಗಟ್ಟಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಕುರ್ಚಿಗೇರಿಸುವ ಆಸೆ ಹುಟ್ಟಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿವೃತ್ತಗೊಳಿಸಲಾಗಿದ್ದ ಹಿಂದುತ್ವ ರಾಜಕಾರಣದ ಮುಂಚೂಣಿ ಮುಂದಾಳು ಸಿ.ಟಿ.ರವಿ, ತಮ್ಮ ವಿರೋಧಿ ಪಡೆಯ ವಿಜಯೇಂದ್ರರ ಪಟ್ಟಾಭಿಷೇಕದ ಬಳಿಕ ಮೈಕೊಡವಿಕೊಂಡು ನಿಂತಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಿರ್ಣಾಯಕರಾದ ಸ್ವಜಾತಿ ಲಿಂಗಾಯತರ ಮತ ಬರಲಿಲ್ಲ
ರಾಜ್ಯಮಟ್ಟದಲ್ಲಿ ವಿಜಯೇಂದ್ರರಿಗೆ ತೊಡೆತಟ್ಟಿ ನಿಂತಿರುವ ಸಿಟಿ ಇತ್ತ ಚಿಕ್ಕಮಗಳೂರು ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಯಡಿಯೂರಪ್ಪ ಬಳಗದ ಶೋಭಾಗೆ ಕೊಕ್ ಕೊಟ್ಟು ಕೇಸರಿ ಕ್ಯಾಂಡಿಡೇಟಾಗುವ ಬಿರುಸಿನ ಪ್ರಯತ್ನ ಶುರುಹಚ್ಚಿಕೊಂಡಿದ್ದಾರೆ. ದಿಲ್ಲಿ ದೊರೆಗಳಿಂದಲೂ ಸಿಟಿಗೆ ಅಭಯ ದೊರೆತಿದೆಯಂತೆ. ಬಿಜೆಪಿ ಬಿಡಾರದಿಂದ ಹೊರಬರುತ್ತಿರುವ ಸುದ್ದಿಗಳು ಸಿಟಿಗೆ ಸೀಟು ಖಾತ್ರಿಯಾಗಿದೆ ಎಂಬ ಸಂದೇಶ ಬಿತ್ತರಿಸುತ್ತದೆ. ಸದಾನಂದ ಗೌಡರ ಹತಾಶೆಯ ನಿವೃತ್ತಿಯಿಂದ ಖಾಲಿಯಾಗಿರುವ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶೋಭಾರನ್ನು ರವಾನೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪರಿಸ್ಥಿತಿ ಕಳೆದ ಅಸೆಂಬ್ಲಿ ಚುನಾವಣೆಯ ನಂತರ ಸುಧಾರಿಸಿದೆ. ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿದೆ; ಕಾರ್ಕಳದಲ್ಲಿ ಬಿಜೆಪಿಗೆ ಬೆವರಿಳಿಸುವಷ್ಟು ಪ್ರಬಲವಾಗಿದ್ದರೆ, ಕಾಪು, ಕುಂದಾಪುರ ಮತ್ತು ಉಡುಪಿಯಲ್ಲಿ ತೀರಾ ದುರ್ಬಲವಾಗೇನೂ ಇಲ್ಲ. ಹೀಗಾಗಿ ಕಾಂಗ್ರೆಸ್ ಎಂಪಿ ಟಿಕೆಟ್ಗೂ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಚರ್ಚೆಯಲ್ಲಿರುವ ಕಾಂಗ್ರೆಸ್ನ ಸಂಭವನೀಯ ಅಭ್ಯರ್ಥಿಗಳಲ್ಲಿ ಮಾಜಿ ಸಂಸದ, ಹಾಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೆಸರು ಕೂಡ ಹೆಚ್ಚು ಸದ್ದು ಮತ್ತು ಸುದ್ದಿ ಮಾಡುತ್ತಿದೆ.
ಹಾಗೆ ನೋಡಿದರೆ ಕಾಂಗ್ರೆಸಿನಲ್ಲಿ ಹೆಗ್ಡೆಯಷ್ಟು ವರ್ಚಸ್ಸಿರುವ ಕ್ಯಾಂಡಿಡೇಟ್ ಬೇರೆ ಯಾರೂ ಇಲ್ಲ. ಒಂದೂವರೆ ವರ್ಷ ಈ ಕ್ಷೇತ್ರದ ಜನಪ್ರಿಯ ಸಂಸದರಾಗಿದ್ದ ಹೆಗ್ಗಳಿಕೆ ಹೆಗ್ಡೆಗಿದೆ. ಚಿಕ್ಕಮಗಳೂರು ಭಾಗದಲ್ಲಿ ಇವತ್ತಿಗೂ ಸಂಸದೆ ಶೋಭಾಗಿಂತ ಹೆಚ್ಚು ಜನ ಸಂಪರ್ಕ ಹೊಂದಿರುವ ಹೆಗ್ಡೆ ಕರಾವಳಿಯಲ್ಲಿ ಸ್ವಜಾತಿ ಬಂಟ್ಸ್ ಕಾರ್ಡ್ ಬಳಸಿ ಹಿಂದುತ್ವದ ತಂತ್ರಗಾರಿಕೆಗೆ ಕಡಿವಾಣ ಹಾಕಬಲ್ಲವರಾಗಿದ್ದಾರೆ. ಕಾರ್ಕಳ, ಕುಂದಾಪುರ, ಕಾಪು ಮತ್ತು ಬ್ರಹ್ಮಾವರ ಬೆಲ್ಟ್ನಲ್ಲಿ ಬಿಜೆಪಿಗೆ ಟಕ್ಕರ್ ಕೊಡುವ ಸಾಮರ್ಥ್ಯವಿದೆ. ಜಾತಿಗಣತಿ ವರದಿಗಾಗಿ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಅವಧಿಯನ್ನು ಈಚೆಗೆ ಸಿಎಂ ಸಿದ್ದು ವಿಸ್ತರಿಸಿದ್ದಾರೆ. ಸಿದ್ದು ನಂಬಿಕಸ್ಥರಾದ ಹೆಗ್ಡೆಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಎಂಬ ಮಾತು ಕೇಳಿಬರಲಾರಂಭಿಸಿದೆ.






