ಕುಂದಾಪುರ ‘ಮೂರು ಮುತ್ತು’ ಖ್ಯಾತಿಯ ರಂಗಭೂಮಿ ಹಾಸ್ಯ ಕಲಾವಿದ ಅಶೋಕ್ ಶಾನುಭಾಗ್ ಇನ್ನಿಲ್ಲ

Views: 6
ಕುಂದಾಪುರ: ಬಾಲಕೃಷ್ಣ ಪೈ ಯಾನೆ ಕುಳ್ಳಪ್ಪು ಅವರ ರೂಪಕಲಾ ಸಂಸ್ಥೆಯ ‘ಮೂರು ಮುತ್ತು’ ನಾಟಕ ಖ್ಯಾತಿಯ ಹಾಸ್ಯ ನಟ ಅಶೋಕ್ ಶಾನುಭಾವ್( 54) ಅವರು ಅಲ್ಪಕಾಲದ ಅಸೌಖ್ಯದಿಂದ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಡಿ.8 ರಂದು ಶುಕ್ರವಾರ ನಿಧನರಾದರು.
ದಿ.ನಾರಾಯಣ ಶಾನುಭಾಗ್ ಹಾಗೂ ದಿ.ಕಸ್ತೂರಿ ಶಾನುಭಾಗ್ ಅವರ ಪುತ್ರ ಅಶೋಕ್ ಶಾನುಭಾಗ್ ಅವರು ರೂಪಕಲಾ ಸಂಸ್ಥೆಯಲ್ಲಿ ಬಾಲ ಕಲಾವಿದರಾಗಿ ರಂಗಕ್ಕೆ ಪ್ರವೇಶಿಸಿದರು. ನಂತರ ಅವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಕನ್ನಡ ಅಷ್ಟೇ ಅಲ್ಲ ಕೊಂಕಣಿಯಲ್ಲಿ ದೇಶ ವಿದೇಶಗಳಲ್ಲಿ ಪ್ರದರ್ಶನ ಕಂಡ ‘ತೀನ್ ರತ್ನ’ ಏಳು ಸಾವಿರಕ್ಕೂ ಹೆಚ್ಚು ಬಾರಿ ಅಭಿನಯಿಸಿ ಜನಪ್ರಿಯ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು.
ಮೃತರು ಆಂಗ್ಲ ಭಾಷಾ ಉಪನ್ಯಾಸಕಿ ಪತ್ನಿ ಸುಮತಿ ಶಣೈ, ಪುತ್ರಿ ಸಂಯುಕ್ತ ಶಾನುಭಾಗ್ ಅವರನ್ನು ಅಗಲಿದ್ದಾರೆ.
ಆರಂಭದಲ್ಲಿ ಇವರು ಕೋಟೇಶ್ವರದ ಸನ್ ರೈಸ್ ಪೈಪ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಾ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.ನಂತರ ಸ್ವಂತ ವ್ಯವಹಾರವನ್ನು ಮಾಡಿಕೊಂಡಿದ್ದರು.
ಇವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟ ‘ಮೂರು ಮುತ್ತು’ ‘ತೀನ್ ರತ್ನ’ ‘ಅವನಲ್ಲ ಇವನು’ ‘ಪಾಪ ಪಾಂಡು’ ‘ರಾಮಕೃಷ್ಣ ಗೋವಿಂದ’ ಹಾಗೂ ಮಜಾ ಟಾಕೀಸ್ ನಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದರು.
ಇವರ ಅಗಲಿಕೆಯ ಸುದ್ದಿ ಕೇಳಿ ಕಲಾಭಿಮಾನಿಗಳು, ಅಭಿಮಾನಿಗಳು ಶೋಕ ವ್ಯಕ್ತಪಡಿಸಿ,ಕಂಬನಿ ಮಿಡಿದಿದ್ದಾರೆ.