ಮೌಲ್ವಿ ಫೋಟೋ ಹಾಕಿದ ಯತ್ನಾಳ್ ಟಾರ್ಗೆಟ್ ಪ್ರಧಾನಿ ಮೋದಿ, ಅಮಿತ್ ಶಾ’- ರೋಚಕ ಟ್ವಿಸ್ಟ್ ಬಯಲಿಗೆಳೆದ ಸಿಎಂ
"ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಈ ರೀತಿಯ ಆರೋಪಗಳನ್ನು ಮಾಡುವುದು ಇದೇ ಮೊದಲ ಸಲವೇನಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ದ ಪುಂಖಾನುಪುಂಖವಾಗಿ ಆರೋಪ ಮಾಡಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ ಪಕ್ಷದ ಹೈಕಮಾಂಡಿಗೆ ಎರಡು ಸಾವಿರ ಕೋಟಿ ರೂಪಾಯಿ ಕೊಡಬೇಕಾಗುತ್ತದೆ ಎನ್ನುವ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ. ಈ ರೀತಿ ಬಹಿರಂಗವಾಗಿ ತಮ್ಮ ಪಕ್ಷದ ಉನ್ನತ ನಾಯಕರ ವಿರುದ್ದವೇ ಆರೋಪ ಮಾಡುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಾಯಿಬಲದ ಹಿಂದೆ ಇರುವ ಶಕ್ತಿ ಯಾವುದು? ಬಿಜೆಪಿಯಲ್ಲಿರುವ ಯಾವ ‘ಜೀ’’ಗಳ ಬಲದಿಂದ ಇಂತಹ ಸ್ವಪಕ್ಷೀಯರ ವಿರುದ್ದ ಇಂತಹ ಮಾನಹಾನಿಕರ ಆರೋಪ ಮಾಡಿಯೂ ಅವರೂ ಬಚಾವಾಗುತ್ತಿದ್ದಾರೆ ಎನ್ನುವುದು ಕೂಡಾ ಬಯಲಾಗಬೇಕಾಗಿದೆ."--ಸಿದ್ದು

Views: 0
ಬೆಂಗಳೂರು: ವಿಜಯಪುರ ಬಿಜೆಪಿ ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಡುಗಡೆ ಮಾಡಿದ ಮೌಲ್ವಿ ತನ್ವೀರ್ ಹಾಶ್ಮಿ ಫೋಟೋಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಮೌಲ್ವಿ ತನ್ವೀರ್ ಹಾಶ್ಮಿ ಅವರ ಜೊತೆಗಿನ ನನ್ನ ಪೋಟೋವನ್ನು ಹಿಡ್ಕೊಂಡು ಯತ್ನಾಳ್ ಅವರು ನನ್ನ ವಿರುದ್ಧ ಆರೋಪ ಮಾಡಿದರು. ಆದರೆ ಅವರ ನಿಜವಾದ ಗುರಿ ಪ್ರಧಾನಿ ನರೇಂದ್ರ ಮೋದಿ ಅವರು ಎನ್ನುವುದು ನಿಧಾನವಾಗಿ ಬಯಲಾಗ ತೊಡಗಿದೆ ಎಂದಿದ್ದಾರೆ.

ಮೌಲ್ವಿ ಹಾಶ್ಮಿ ಅವರ ಜೊತೆಗೆ ಇತರ ಬಿಜೆಪಿ ನಾಯಕರು ಮಾತ್ರವಲ್ಲ ಸಾಕ್ಷಾತ್ ನರೇಂದ್ರ ಮೋದಿ ಅವರೂ ಸಂಬಂಧ ಹೊಂದಿರುವುದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಪೋಟೋಗಳು ಸ್ಪಷ್ಟವಾಗಿ ಹೇಳುತ್ತಿವೆ. ದೀರ್ಘಕಾಲದಿಂದ ಹಾಶ್ಮಿ ಅವರಿಗೆ ಅತ್ಯಂತ ಆತ್ಮೀಯರಾಗಿರುವ ಮತ್ತು ಊರಿನಲ್ಲಿ ತನ್ನ ನೆರೆಹೊರೆಯಾಗಿರುವ ಯತ್ನಾಳ್ ಅವರಿಗೆ ಇದು ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು ಮೌಲ್ವಿ ಹಾಶ್ಮಿ ಜೊತೆ ಖುದ್ದು ಪ್ರಧಾನಿ ಮೋದಿ ಅವರೇ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷತೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿ ಹೋಗಿರುವುದರಿಂದ ಯತ್ನಾಳ್ ಅವರು ಕೆರಳಿ ಕೆಂಡವಾಗಿದ್ದಾರೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ದ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಮೌಲ್ವಿ ತನ್ವೀರ್ ಹಾಶ್ಮಿ ಜೊತೆಗಿನ ನನ್ನ ಪೋಟೋವನ್ನು ತೋರಿಸಿ ಆರೋಪ ಮಾಡಿದ್ದಾರೆ. ಈ ಆರೋಪದ ನಂತರ ಮೌಲ್ವಿ ಅವರ ಜೊತೆಗಿನ ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧದ ವಿವರವೂ ಹೊರಬರಲಿದೆ ಎನ್ನುವುದು ಅವರಿಗೆ ಖಂಡಿತ ಗೊತ್ತಿತ್ತು. ಅವೆಲ್ಲವೂ ಬಯಲಾಗಿ ಪ್ರಧಾನಿ ಮತ್ತು ಬಿಜೆಪಿ ನಾಯಕರು ಮುಜುಗರಕ್ಕೀಡಾಗಲಿ ಎನ್ನುವ ದುರುದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡುವ ಆಟ ಆಡಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಮೌಲ್ವಿ ಹಾಶ್ಮಿ ಅವರ ಜೊತೆಗಿನ ನನ್ನ ಸ್ನೇಹ ಸಂಬಂಧವನ್ನು ನಾನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದೇನೆ. ಹಾಶ್ಮಿಯವರೂ ಕೂಡಾ ಅವರ ಮೇಲಿನ ಆರೋಪದ ತನಿಖೆಯನ್ನು ಕೇಂದ್ರ ಸರ್ಕಾರವೇ ನಡೆಸಲಿ ಎಂದು ಸವಾಲು ಹಾಕಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿಯವರು ತನ್ನ ವಿರುದ್ದದ ಆರೋಪಕ್ಕೆ ಪ್ರತಿಕ್ರಿಯಿಸಲೇ ಬೇಕಾಗುತ್ತದೆ. ಮೌಲಿ ತನ್ವೀರ್ ಹಾಶ್ಮಿ ಅವರಿಗೆ ನಿಜವಾಗಿ ಐಸಿಎಸ್ ಜೊತೆ ಸಂಬಂಧ ಇದ್ದರೆ ಆ ಬಗ್ಗೆ ತನಿಖೆಗೆ ಪ್ರಧಾನಿಯವರು ತಕ್ಷಣ ಆದೇಶ ನೀಡಬೇಕು ಮತ್ತು ಹಾಶ್ಮಿ ಮತ್ತು ತನ್ನ ಸಂಬಂಧದ ವಿವರವನ್ನು ದೇಶದ ಮುಂದಿಡಬೇಕು. ಇದು ಎರಡೂ ಮಾಡದೆ ಇದ್ದರೆ ಇಂತಹ ಸುಳ್ಳು ಆರೋಪ ಮಾಡುವ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕ್ರಮವನ್ನಾದರೂ ಕೈಗೊಳ್ಳಬೇಕು.

ಇನ್ನು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಈ ರೀತಿಯ ಆರೋಪಗಳನ್ನು ಮಾಡುವುದು ಇದೇ ಮೊದಲ ಸಲವೇನಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ದ ಪುಂಖಾನುಪುಂಖವಾಗಿ ಆರೋಪ ಮಾಡಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ ಪಕ್ಷದ ಹೈಕಮಾಂಡಿಗೆ ಎರಡು ಸಾವಿರ ಕೋಟಿ ರೂಪಾಯಿ ಕೊಡಬೇಕಾಗುತ್ತದೆ ಎನ್ನುವ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ. ಈ ರೀತಿ ಬಹಿರಂಗವಾಗಿ ತಮ್ಮ ಪಕ್ಷದ ಉನ್ನತ ನಾಯಕರ ವಿರುದ್ದವೇ ಆರೋಪ ಮಾಡುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಾಯಿಬಲದ ಹಿಂದೆ ಇರುವ ಶಕ್ತಿ ಯಾವುದು? ಬಿಜೆಪಿಯಲ್ಲಿರುವ ಯಾವ ‘ಜೀ’’ಗಳ ಬಲದಿಂದ ಇಂತಹ ಸ್ವಪಕ್ಷೀಯರ ವಿರುದ್ದ ಇಂತಹ ಮಾನಹಾನಿಕರ ಆರೋಪ ಮಾಡಿಯೂ ಅವರೂ ಬಚಾವಾಗುತ್ತಿದ್ದಾರೆ ಎನ್ನುವುದು ಕೂಡಾ ಬಯಲಾಗಬೇಕಾಗಿದೆ.
ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಮೌಲ್ವಿ ತನ್ವೀರ್ ಹಾಶ್ಮಿ ಕುಟುಂಬದ ಜೊತೆಯಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ವ್ಯಾಪಾರಿ ಸಂಬಂಧ ಕೂಡ ಇದೆ ಎನ್ನುವುದು ಬಯಲಾಗಿದೆ. ಯತ್ನಾಳ್ ಅವರ ಆರೋಪದಂತೆ ತನ್ವೀರ್ ಹಾಶ್ಮಿ ಅವರಿಗೆ ಐಸಿಎಸ್ ಜೊತೆ ಸಂಬಂಧ ಇರುವುದಾಗಿದ್ದರೆ ಅವರ ಜೊತೆಗೆ ವ್ಯವಹಾರದ ಪಾಲುದಾರರಾಗಿರುವ ಯತ್ನಾಳ್ ಅವರಿಗೆ ಅದು ಗೊತ್ತಿರಲಿಲ್ಲವೇ? ಗೊತ್ತಿದ್ದೂ ಸುಮ್ಮನಿರಲು ಕಾರಣವೇನು? ಇಷ್ಟು ಸಮಯದ ನಂತರ ಇಂತಹ ಆರೋಪ ಮಾಡಲು ಕಾರಣಗಳೇನು ಎನ್ನುವುದನ್ನು ಕೂಡ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.






