ಕರಾವಳಿ

ಬಿಜೆಪಿ ಟಿಕೆಟ್ ಕೊಡಿಸುದಾಗಿ ವಂಚಿಸಿದ ಚೈತ್ರಾಗೆ ಕೊನೆಗೂ ಸಿಕ್ತು ಜಾಮೀನು, ಇಂದು ಜೈಲಿಂದ ಬಿಡುಗಡೆ

Views: 0

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ 5 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ‌ ಉಗ್ರ ಹಿಂದುತ್ವದ ಭಾಷಣಕಾರ್ತಿ ಕುಂದಾಪುರದ ಚೈತ್ರಾಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಆಕೆ ಮಂಗಳವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾಳೆ. ಆಕೆಯ ಜತೆ ಸಹ ಆರೋಪಿ ಶ್ರೀಕಾಂತ್‌ ಕೂಡಾ ಬಿಡುಗಡೆಯಾಗಲಿದ್ದಾನೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್‌ 12ರ ರಾತ್ರಿ ಚೈತ್ರಾಳನ್ನು ಉಡುಪಿಯಲ್ಲಿ ಬಂಧಿಸಲಾಗಿತ್ತು. ಅದೇ ಸಂದರ್ಭದಲ್ಲಿ ಆಕೆಯ ಸಹಚರ ಗಗನ್‌ ಕಡೂರ್‌, ಪ್ರಜ್ವಲ್‌, ಶ್ರೀಕಾಂತ್‌ ಕೂಡಾ ಸೆರೆಯಾಗಿದ್ದರು. ಮುಂದೆ ಕಡೂರಿನ ರಮೇಶ್‌ ಮತ್ತು ಧನರಾಜ್‌ ಹಾಗೂ ಚೆನ್ನಾ ನಾಯ್ಕ್‌ ಸೆರೆಸಿಕ್ಕಿದ್ದರು. ಅದಾದ ಕೆಲವೇ ದಿನದಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಕಟಕ್‌ನಲ್ಲಿ ಬಂಧಿಸಲಾಗಿತ್ತು. ಹಾಲಶ್ರೀ ಸ್ವಾಮೀಜಿಗೆ ನವೆಂಬರ್‌ 11ರಂದು ಕೋರ್ಟ್‌ ಜಾಮೀನು ನೀಡಿತ್ತು. ಇದೀಗ ಪ್ರಕರಣದ ಮೊದಲ ಆರೋಪಿ ಚೈತ್ರಾ ಮತ್ತು ಏಳನೇ ಆರೋಪಿ ಶ್ರೀಕಾಂತ್‌ಗೆ 3ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಬಂಧನವಾದ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಚೈತ್ರಾ ಎಂಟ್‌ ಟೀಮ್‌ ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿತ್ತು. ಆದರೆ, ಸಿಕ್ಕಿರಲಿಲ್ಲ. ಈ ನಡುವೆ, ಹಾಲಶ್ರೀಗೆ ಜಾಮೀನು ಸಿಕ್ಕಿರುವುದು ಚೈತ್ರಾ ಮತ್ತು ತಂಡಕ್ಕೆ ಅನುಕೂಲವಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಸುಮಾರು 800 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಚೈತ್ರಾ ಮತ್ತು ಶ್ರೀಕಾಂತ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ಕೋರ್ಟ್‌ ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಎರಡು ಲಕ್ಷ ಬಾಂಡ್ ನೀಡುವಂತೆ ಸೂಚಿಸಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿದೆ. ಆರೋಪಿಗಳಿಂದ ಈಗಾಗಲೇ ಅವರು ವಂಚನೆ ಮಾಡಿದ ಲಕ್ಷಾಂತರ ರೂ. ನಗದು, ಆಸ್ತಿ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

 

 

Related Articles

Back to top button