ವಂಚನೆ ಪ್ರಕರಣ| ಚೈತ್ರಾ ತಂಡದ ಚನ್ನಾ ನಾಯ್ಕ್ ಮೇಲೆ ಜೈಲಿನಲ್ಲಿ ಹಲ್ಲೆ

Views: 0
ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಆರೋಪಿ ಚನ್ನಾ ನಾಯ್ಕ್ ಮೇಲೆ ಸಹ ಕೈದಿಗಳು ಹಲ್ಲೆ ಮಾಡಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ₹ 5 ಕೋಟಿ ಪಡೆದು ವಂಚಿಸಿದ್ದ ಆರೋಪದಡಿ ಚೈತ್ರಾ ಕುಂದಾಪುರ, ಚನ್ನಾ ನಾಯ್ಕ್ ಸೇರಿದಂತೆ ಹಲವು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಎಲ್ಲ ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.
‘ವಿಚಾರಣಾಧೀನ ಕೈದಿ ಆಗಿರುವ ಚನ್ನಾ ನಾಯ್ಕ್ ಹಾಗೂ ಇತರರನ್ನು ಜೈಲಿನ ಒಂದನೇ ಟವರ್‌ನ 4ನೇ ವಿಭಾಗದ 1ನೇ ಬ್ಯಾರಕ್‌ನಲ್ಲಿರುವ ಕೊಠಡಿಯಲ್ಲಿ ಇರಿಸಲಾಗಿದೆ. ನ. 26ರಂದು ಸಂಜೆ ಚನ್ನಾ ನಾಯ್ಕ್, ಮತ್ತೊಬ್ಬ ಆರೋಪಿ ಜೊತೆ ಮಾತನಾಡುತ್ತಿದ್ದಾಗ ಗಲಾಟೆ ಆಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ವಿಚಾರಣಾಧೀನ ಕೈದಿಗಳಾದ ಚೇತನ್, ರಾಜ್‌ಕುಮಾರ್, ಅಭಿಷೇಕ್, ಯೋಗೇಂದ್ರ ಹಾಗೂ ಧನುಷ್ ಕ್ಷುಲ್ಲಕ ಕಾರಣಕ್ಕಾಗಿ ಚನ್ನಾ ನಾಯ್ಕ್ ಜೊತೆ ಜಗಳ ಮಾಡಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆರೋಪಿಗಳು ಚನ್ನಾ ನಾಯ್ಕ್‌ನ ಕಣ್ಣು ಹಾಗೂ ಮೂಗಿಗೆ ಹೊಡೆದಿದ್ದಾರೆ.’
‘ಹಲ್ಲೆ ಸಂಗತಿ ತಿಳಿಯುತ್ತಿದ್ದಂತೆ ಜೈಲಿನ ಸಿಬ್ಬಂದಿ ಸ್ಥಳಕ್ಕೆ ಹೋಗಿ ಜಗಳ ಬಿಡಿಸಿದ್ದಾರೆ. ಹಲ್ಲೆ ಸಂಬಂಧ ಜೈಲಿನ ಅಧಿಕಾರಿಗಳು ಠಾಣೆಗೆ ದೂರು ನೀಡಿದ್ದಾರೆ. ಚೇತನ್, ರಾಜ್‌ಕುಮಾರ್, ಅಭಿಷೇಕ್, ಯೋಗೇಂದ್ರ ಹಾಗೂ ಧನುಷ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.