ಬೆಂಗಳೂರು ಕಂಬಳ :ಪ್ರತ್ಯೇಕ ಸಂಚಾರಿ ನಿಯಮ, ವಾಹನಗಳಿಗೆ ಬದಲಿ ಮಾರ್ಗಸೂಚಿ ಇಲ್ಲಿದೆ…

Views: 0
ಬೆಂಗಳೂರು, ನವೆಂಬರ್ 24: ನಾಳೆ ಹಾಗೂ ನಾಡಿದ್ದು ಅಂದರೆ ನವೆಂಬರ್ 25 ಹಾಗೂ ನವೆಂಬರ್ 26 ರಂದು ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿರುವುದರಿಂದ ಸುಮಾರು ಎಂಟು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಕಂಬಳ ಸಿದ್ಧತೆ ಅಂತಿಮ ಹಂತಕ್ಕೆ ತಲುಪಿದ್ದು, ಎಲ್ಲಾ ರೀತಿಯಲ್ಲೂ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಕಂಬಳ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಹೆಚ್ಚಿದೆ. ಇನ್ನು ಅರಮನೆ ಮೈದಾನ ಸುತ್ತಲು ವಾಹನ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಈಗಾಗಲೇ ಪ್ರತ್ಯೇಕ ಸಂಚಾರಿ ನಿಯಮಗಳನ್ನು ಮಾಡಲಾಗಿದ್ದು, ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಕೂಡ ಮಾಡಲಾಗಿದೆ.
ಇನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್‌ಪೋರ್ಟ್ ಪ್ರಯಾಣಿಕರಿಗೆ ಕೂಡ ವಿಶೇಷ ಮನವಿ ಮಾಡಲಾಗಿದೆ. ಬೆಂಗಳೂರು ಕಂಬಳ ಹಿನ್ನೆಲೆಯಲ್ಲಿ ನವೆಂಬರ್ 25 ಹಾಗೂ ನವೆಂಬರ್ 26 ರಂದು ನಗರದಲ್ಲಿ ಟ್ರಾಫಿಕ್ ಇರಲಿದ್ದು, ವಿಮಾನ ನಿಲ್ದಾಣಕ್ಕೆ ತಲುಪಲು ಸಾಮಾನ್ಯ ಸಮಯಕ್ಕಿಂತ ಬೇಗ ಹೊರಡಿ ಎಂದು ಮನವಿ ಮಾಡಿಕೊಂಡಿದೆ.
ಬೆಂಗಳೂರು ಕಂಬಳದಲ್ಲಿ ಸೆಲೆಬ್ರಿಟಿಗಳು, ವಿಐಪಿಗಳು ಪಾಲ್ಗೊಳ್ಳುವುದರಿಂದ ಅರಮೆನ ಮೈದಾನದ ಸುತ್ತಮುತ್ತ ಸಂಚಾರ ದಟ್ಟಣೆ ಇರುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುವವರು ತಾವಿರುವ ಸ್ಥಳಗಳಿಂದ ಬೇಗ ಹೊರಡಿ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ.
ಇನ್ನು ಕಂಬಳ ಕಾರ್ಯಕ್ರಮ ಹೊರತುಪಡಿಸಿ ಸಂಚರಿಸುವ ವಾಹನ ಸವಾರರು ನವೆಂಬರ್ 25 ಹಾಗೂ ನವೆಂಬರ್ 26 ರಂದು ಈ ಮಾರ್ಗಸೂಚಿಯನ್ನು ಪಾಲಿಸಬೇಕಾಗಿದೆ.
* ಮೈಸೂರು ಬ್ಯಾಂಕ್ ರಸ್ತೆ ಮೂಲಕ ವಸಂತ್ ನಗರ ಅಂಡರ್ ಪಾಸ್ ಹೋಗುವ ಅರಮನೆ ರಸ್ತೆ ಮೂಲಕವೇ ಸಂಚರಿಸಬೇಕು.
* ಅರಮನೆ ರಸ್ತೆ, ಬಿಡಿಎ ಜಂಕ್ಷನ್‌ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್‌ನಿಂದ ಹಳೇ ಉದಯ ಟಿವಿ ಜಂಕ್ಷನ್‌ವರೆಗೆ ಎಮ್ ವಿ ಜಯರಾಂ ರಸ್ತೆ ಬಳಕೆಗೆ ಸೂಚನೆ.
* ಮೇಖ್ರಿ ಸರ್ಕಲ್‌ನಿಂದ ಎಲ್‌ಆರ್ ಡಿಇ ಜಂಕ್ಷನ್‌ವರೆಗೆ ಬಳ್ಳಾರಿ ರಸ್ತೆ ಬಳಸಲು ಸೂಚನೆ.
* ಬಾಳೆಕುಂದಿ ಸರ್ಕಲ್‌ನಿಂದ ಲೀ ಮೆರಿಡಿಯನ್ ಅಂಡರ್ ಪಾಸ್‌ವರೆಗೆ ಕನ್ನಿಂಗ್ ಹಾಮ್ ರೋಡ್ ಬಳಸಲು ಸೂಚನೆ.
* ಹಳೇ ಉದಯ ಟಿವಿ ಜಂಕ್ಷನ್ ನಿಂದಎಲ್ ಆರ್‌ಡಿ ಜಂಕ್ಷನ್ ವರೆಗೆ ಮಿಲ್ಲರ್ಸ್ ಜಂಕ್ಷನ್ ಬಳಸಲು ಸೂಚನೆ.
* ಜಯಮಹಲ್ ರಸ್ತೆ ಹಾಗೂ ಅರಮನೆ ರಸ್ತೆ ಸುತ್ತಮುತ್ತ ಸಂಚಾರ ಮಾಡುವವರು ಜಯಮಹಲ್ ರಸ್ತೆ ಬಳಕೆಗೆ ಅವಕಾಶ ನೀಡಲಾಗಿದೆ
ಬೆಂಗಳೂರು ಕಂಬಳಕ್ಕೆ ಸೆಲೆಬ್ರೆಟಿಗಳ ದಂಡು
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲಾಗಿದ್ದು ಭರ್ಜರಿ ತಯಾರಿ ಕೂಡ ಮಾಡಿಕೊಳ್ಳಲಾಗಿದೆ. ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ. ಹೀಗಾಗಿ ಬೆಂಗಳೂರು ಕಂಬಳಕ್ಕೆ ಸೆಲೆಬ್ರೆಟಿಗಳ ದಂಡೇ ಹರಿದು ಬರಲಿದೆ. ಸ್ಯಾಂಡಲ್‌ವುಡ್, ಬಾಲಿವುಡ್ ನಟ, ನಟಿಯರ ಸಮ್ಮಿಲನವಾಗಲಿದ್ದು, ಕಂಬಳಕ್ಕೆ ತಾರಾ ಮೆರುಗು ಬರಲಿದೆ.
ನಟಿ ಅನುಷ್ಕಾ ಶೆಟ್ಟಿ ಬೆಂಗಳೂರು ಕಂಬಳವನ್ನು ಉದ್ಘಾಟಿಸಲಿದ್ದಾರೆ. ಇನ್ನು, ಬಾಲಿವುಡ್ ನಟಿ, ಕರಾವಳಿ ಬೆಡಗಿ ಐಶ್ವರ್ಯಾ ರೈ ಬಚ್ಚನ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಸ್ಯಾಂಡಲ್‌ವುಡ್‌ನ ಯಶ್, ದರ್ಶನ್ ಕಂಬಳಕ್ಕೆ ಆಗಮಿಸುವ ಸಾಧ್ಯತೆ ಇದ್ದು, ತುಳುನಾಡು ಮೂಲದವರಾದ ಸುನೀಲ್ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ಹಾಗೂ ಮೊಹಮ್ಮದ್ ಶೆಮಿ ಕೂಡ ಭಾಗಿಯಾಗುವ ಸಾಧ್ಯತೆ ಇದೆ.







