ಉಡುಪಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ- ಕೊಲೆಗೆ ಬಳಸಿದ್ದ ಆಯುಧ ವಶಕ್ಕೆ

Views: 1
ಉಡುಪಿ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆ ಮನೆಯಿಂದ ಕೊಲೆ ಕೃತ್ಯಕ್ಕೆ ಬಳಸಿದ್ದ ಚೂರಿ ಮತ್ತಿತರ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹಜರು ವೇಳೆ ಮಂಗಳೂರಿನ ಬಿಜೈ ಅಪಾರ್ಟ್ಮೆಂಟ್‌ನಲ್ಲಿ ಆಯುಧಗಳನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಆರೋಪಿ ಚೂರಿಯನ್ನು ನದಿಗೆ ಎಸೆದಿದ್ದೇನೆ ಎಂದು ಹೇಳಿಕೆ ನೀಡಿದ್ದ.
ಮನೆಯೊಳಗೆಯೇ ಅದನ್ನು ಬಚ್ಚಿಟ್ಟುಕೊಂಡಿದ್ದ ಆತ ಪೊಲೀಸರಿಗೆ ವಿವಿಧ ಕಥೆ ಹೇಳಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದ. 2 ದಿನಗಳಿಂದ ಪೊಲೀಸರು ಮೂಲ್ಕಿ, ಕೂಳೂರು ಸೇತುವೆ ಬದಿ ಸಹಿತ ಶುಕ್ರವಾರ ಪದವಿನಂಗಡಿ, ಕೊಂಚಾಡಿಯ ರವಿಶಂಕರ ವಿದ್ಯಾಮಂದಿರದ ಬಳಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರೂ ಚೂರಿ ಪತ್ತೆಯಾಗಿರಲಿಲ್ಲ.
ಆತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಬಿಜೈನಲ್ಲಿರುವ ಆತನ ಫ್ಲ್ಯಾಟ್‌ಗೆ ಕರೆದುಕೊಂಡು ಹೋದ ವೇಳೆ ಚೂರಿ ಇರಿಸಿದ ಜಾಗವನ್ನು ತಿಳಿಸಿದ್ದಾನೆ ಎನ್ನಲಾಗಿದೆ.
ಕೃತ್ಯಕ್ಕೆ ಬಳಸಿದ ಮಾಸ್ಕ್, ರಕ್ತಸಿಕ್ತ ಬಟ್ಟೆ, ಬಳಸಿದ ಕಾರು ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.